ಬಹುಜನ ಸಮಾಜ ಪಕ್ಷದ ಅರ್ಜಿಯನ್ನು ಪುರಸ್ಕರಿಸಿದ ಲೋಕಸಭೆ ಅಧ್ಯಕ್ಷ ಸೋಮನಾಥ ಚಟರ್ಜಿ ಮಂಗಳವಾರ ಆ ಪಕ್ಷಕ್ಕೆ ಸೇರಿದ ಮೂವರು ಲೋಕಸಭೆ ಸದಸ್ಯರನ್ನು ತಕ್ಷಣವೇ ಜಾರಿಗೆ ಬರುವಂತೆ ಅನರ್ಹಗೊಳಿಸಿದ್ದಾರೆ ಮತ್ತು ಆ ಸ್ಥಾನಗಳು ತೆರವಾಗಿರುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಜ.27ರಂದು ತೆಗೆದುಕೊಂಡ ನಿರ್ಧಾರವನ್ನು ಮಂಗಳವಾರ ಪ್ರಕಟಿಸಲಾಯಿತು ಎಂದು ಬಲ್ಲ ಮೂಲಗಳು ತಿಳಿಸಿವೆ.
ರಮಾಕಾಂತ್ ಯಾದವ್, ಬಾಲಚಂದ್ರ ಯಾದವ್ ಮತ್ತು ಮೊಹಮದ್ ಶಾಹಿದ್ ಅಕ್ಲಕ್ ಮಾನ್ಯತೆ ಕಳೆದುಕೊಂಡ ಸದಸ್ಯರಾಗಿದ್ದಾರೆ. ಮೂವರು ಸಂಸದರು ಸಮಾಜವಾದಿ ಪಕ್ಷದ ಸಾರ್ವಜನಿಕ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಿಎಸ್‌ಪಿಯನ್ನು ನಿಂದಿಸಿದ್ದಾರೆ ಎಂದು ಬಿಎಸ್‌ಪಿ ಸಂಸದೀಯ ಪಕ್ಷದ ನಾಯಕ ರಾಜೇಶ್ ವರ್ಮಾ ಏಪ್ರಿಲ್ 2007ರಲ್ಲಿ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿ ಆರೋಪಿಸಿದ್ದರು.
ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ದೂರನ್ನು ಪರಿಗಣಿಸಿ ಕಿಶೋರ್ ಚಂದ್ರ ದೇವ್ ನೇತೃತ್ವದ ಹಕ್ಕು ಚ್ಯುತಿ ಸಮಿತಿಗೆ ಒಪ್ಪಿಸಲಾಯಿತು. ಸಮಿತಿಯು ವರದಿ ಸಲ್ಲಿಸಿದ ಬಳಿಕ ದೂರುದಾರರಿಗೆ ಮತ್ತು ಪ್ರತಿವಾದಿಗಳ ವೈಯಕ್ತಿಕ ವಿಚಾರಣೆ ನಡೆಸಿ ಸ್ಪೀಕರ್ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
|