ಬೋಗಸ್ ಮತ್ತು ಉದ್ದೇಶರಹಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಕ್ಕೆ ಕಡಿವಾಣ ಹಾಕಲು ತೀರ್ಮಾನಿಸಿರುವ ಸುಪ್ರೀಂ ಕೋರ್ಟ್, ಇಂಥ ಬೋಗಸ್ ಅರ್ಜಿ ಸಲ್ಲಿಸುವವರಿಗೆ ಒಂದು ಲಕ್ಷ ರೂ. ದಂಡ ವಿಧಿಸುವ ಕಾಲ ಬಂದಿದೆ ಎಂದು ಹೇಳಿದೆ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಒಂದು ಬ್ರಹ್ಮಾಸ್ತ್ರವಿದ್ದಂತೆ. ಈಗ ಪಿಐಎಲ್‌ಗಳ ವಿಚಾರಣೆಗೆ ನ್ಯಾಯಾಲಯದ ಅಮೂಲ್ಯ ಸಮಯ ವ್ಯಯವಾಗುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಈ ಅರ್ಜಿಗಳು ಬರುತ್ತಿರುವುದರಿಂದ ಇವುಗಳನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪಿಐಎಲ್ ಎಂಬುದು ಆರ್ಥಿಕವಾಗಿ ಸಾಮರ್ಥ್ಯವಿಲ್ಲದ ದುರ್ಬಲ ವರ್ಗದ ಜನತೆಗಾಗಿ. ಆದರೆ ಇದೀಗ ಅದು ಕಿರುಕುಳದ ಸಂಗತಿಯಾಗುತ್ತಿದೆ ಎಂದು ವಿಷಾದಿಸಿರುವ ನ್ಯಾಯಮೂರ್ತಿಗಳಾದ ಎಚ್.ಕೆ.ಹೇಮಾ ಮತ್ತು ಮಾರ್ಕಾಂಡೇಯ ಕಾಟ್ಜು ಅವರನ್ನೊಳಗೊಂಡ ನ್ಯಾಯಪೀಠ, ಪಿಐಎಲ್‌ಗಳು ಇಂದು ಖಾಸಗಿ ಹಿತಾಸಕ್ತಿ ಮೊಕದ್ದಮೆ ಅಥವಾ ಪೈಸೆ ಆದಾಯ ಮೊಕದ್ದಮೆಗಳಾಗುತ್ತಿವೆ ಎಂದು ವಿಷಾದಿಸಿದೆ.
ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಜನತೆ ಅರ್ಥ ಮಾಡಿಕೊಳ್ಳಲಾರರು. ಒಂದು ಲಕ್ಷ ರೂ.ವರೆಗೆ ದಂಡ ವಿಧಿಸದ ಹೊರತು ಜನರು ಇಂಥ ಖೋಟಾ ಅರ್ಜಿಗಳನ್ನು ಸಲ್ಲಿಸುವುದನ್ನು ನಿಲ್ಲಿಸಲಾರರು ಎಂದಿರುವ ಪೀಠವು, ನಿರ್ದಿಷ್ಟ ಉದ್ದೇಶಕ್ಕೆ ರೂಪಿಸಲಾದ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಭಾರಿ ದಂಡ ವಿಧಿಸುವ ಕಾಲ ಬಂದಿದೆ ಎಂದು ಅಭಿಪ್ರಾಯಪಟ್ಟಿದೆ.
ದೇಶಾದ್ಯಂತ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭ ನ್ಯಾಯಪೀಠದ ಈ ಅಭಿಪ್ರಾಯ ಹೊರಬಿದ್ದಿದೆ.
ಕೆಲವೊಮ್ಮೆ ಒಳ್ಳೆಯ ಹಿತಾಸಕ್ತಿಯುಳ್ಳ ಅರ್ಜಿಗಳಿರುತ್ತವೆ. ಆದರೆ ಶೇ.95ರಷ್ಟು ಪಿಐಎಲ್ ಅರ್ಜಿಗಳು ಕೂಡ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಗೆಡಹುವಂಥವಾಗಿರುತ್ತವೆ ಎಂದು ನ್ಯಾಯಪೀಠ ಹೇಳಿದೆ. ಇಂಥ ಬೋಗಸ್ ವಿಷಯಗಳ ವಿವಾರ ಪರಿಹರಿಸುವುದಕ್ಕೇ ನಮ್ಮೆಲ್ಲಾ ಸಮಯ ವ್ಯರ್ಥವಾಗುತ್ತಿದೆ. ಹೈಕೋರ್ಟ್‌ಗಳಲ್ಲಂತೂ ಅರ್ಧಕ್ಕರ್ಧ ಸಮಯವು ಪಿಐಎಲ್‌ಗಳಿಗಾಗಿಯೇ ವ್ಯಯವಾಗುತ್ತಿದೆ ಎಂದು ತಿಳಿಸಿರುವ ನ್ಯಾಯಮೂರ್ತಿ ಕಾಟ್ಜು, ಹೆಚ್ಚಿನ ಪಿಐಎಲ್‌ಗಳು ಬೋಗಸ್ ಆಗಿರುತ್ತವೆ ಎಂದು ಹೇಳಿದರು.
|