ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಗೆ ಚೆನ್ನೈನ ಸಿಬಿಐ ಕೋರ್ಟೊಂದು ಬುಧವಾರ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಪುಣೆಯ ಯರವಾಡ ಜೈಲಿನಲ್ಲಿರುವ ತೆಲಗಿ, ಅಬ್ದುಲ್ ವಾಹಿದ್ ಮತ್ತು ಜಾಕೋಬ್ ಚಾಕೊ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ತಪ್ಪೊಪ್ಪಿಕೊಂಡಿದ್ದು, ಜೈಲು ಅಧಿಕಾರಿಗಳ ಮುಖಾಂತರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಕೇಂದ್ರೀಯ ಕಾರಾಗೃಹದಲ್ಲಿರುವ ಬಾಲಾಜಿ ಕೂಡ ವಿಡಿಯೊ ಕಾನ್ಫರೆನ್ಸಿಂಗ್‌ನಲ್ಲಿ ತಪ್ಪೊಪ್ಪಿಕೊಂಡಿದ್ದು, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಬ್ಬ ಆರೋಪಿ ಪೀಟರ್ ಕೆನಡಿ ಕೋರ್ಟ್ ಎದುರು ಹಾಜರಾಗಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದಾನೆ.
ಉಳಿದ ಆರೋಪಿಗಳಾದ ನಿಜಾಮುದ್ದೀನ್, ಅವನ ಪತ್ನಿ ನಾಸ್ನೀನ್, ಅಮಾನತಾದ ಡಿಐಜಿ ಮೊಹಮದ್ ಅಲಿ, ನಗರ ಸಹಾಯಕ ಆಯುಕ್ತ ಶಂಕರ್ ಮತ್ತು ಎಲ್‌ಐಸಿ ಏಜಂಟ್ ರಾಮಸ್ವಾಮಿ ಸಾಥು ಜಾಮೀನು ಪಡೆದಿದ್ದು, ಕೋರ್ಟ್‌ನಲ್ಲಿ ಹಾಜರಿದ್ದರು.
ಆರೋಪಿಗಳು ನಕಲಿ ಛಾಪಾ ಕಾಗದಗಳನ್ನು ಮುದ್ರಿಸಿ ಸಾರ್ವಜನಿಕ ಬೊಕ್ಕಸಕ್ಕೆ ಕೋಟ್ಯಂತರ ರೂ. ಹಾನಿ ಮಾಡಿದ್ದಾರೆ. ಒಳಸಂಚು, ವಂಚನೆ ಮತ್ತು ನಕಲಿ ಛಾಪಾ ಕಾಗದ ಮುದ್ರಣ ಮತ್ತು ನಕಲಿ ಸಹಿ ಆರೋಪಗಳನ್ನು ಆಪಾದಿತರ ವಿರುದ್ಧ ಹೊರಿಸಲಾಗಿದೆ.
|