ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತಾಭಸ್ಮ ಹೊಂದಿರುವ ಕೊನೆಯ ಕಲಶವನ್ನು ಅವರ 60ನೇ ಪುಣ್ಯತಿಥಿಯ ಅಂಗವಾಗಿ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿಯ ಬಂಧುಗಳು, ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಆರ್.ಆರ್. ಪಾಟೀಲ್ ದಕ್ಷಿಣ ಮುಂಬೈನಲ್ಲಿ ನಡೆದ ವಿಸರ್ಜನೆ ಕ್ರಿಯೆಯಲ್ಲಿ ಬುಧವಾರ ಬೆಳಿಗ್ಗೆ ಪಾಲ್ಗೊಂಡಿದ್ದರು.
ದಕ್ಷಿಣ ಮುಂಬೈನ ಐತಿಹಾಸಿಕ ಗಿರ್ಗಾಮ್ ಚೌಪಟ್ಟಿಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸುವ ಮುನ್ನ ಮುಂಬೈ ಪೊಲೀಸರು ಸರ್ಕಾರಿ ಗೌರವ ಸಲ್ಲಿಸಿದರು. 1948ರಲ್ಲಿ ಗಾಂಧಿಯ ಹತ್ಯೆಯಾದ ಬಳಿಕ ನದಿಗಳಲ್ಲಿ ಮತ್ತು ಸಾಗರಗಳಲ್ಲಿ ಚಿತಾಭಸ್ಮವನ್ನು ವಿಸರ್ಜಿಸಿದ ನಂತರ ಚಿತಾಭಸ್ಮವನ್ನು ಹೊಂದಿದ ಕೊನೆಯ ಕಲಶವನ್ನು ಗಾಂಧಿ ಭೇಟಿ ನೀಡಿದ್ದ ಮಣಿಭವನದಲ್ಲಿ ಇಡಲಾಗಿತ್ತು.
ಮಹಾತ್ಮ ಅವರ ಚಿತಾಭಸ್ಮವಿದ್ದ ಕಲಶವನ್ನು ಪತ್ತೆಮಾಡಿ ಬಳಿಕ ವಿಸರ್ಜಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಮೊದಲನೆ ಪ್ರಕರಣದಲ್ಲಿ ಭುವನೇಶ್ವರದ ಬ್ಯಾಂಕ್ ಲಾಕರ್‌ನಲ್ಲಿ 1997ರಲ್ಲಿ ಗಾಂಧಿ ಚಿತಾಭಸ್ಮವಿರುವ ಕಲಶವನ್ನು ಪತ್ತೆಮಾಡಲಾಗಿದ್ದು, ಚಿತಾಭಸ್ಮವನ್ನು ಅಲಹಾಬಾದ್‌ನಲ್ಲಿ ವಿಸರ್ಜಿಸಲಾಗಿತ್ತು.
ಮಣಿಭವನದ ಕಲಶವನ್ನು ಗುಜರಾತ್ ನಿವಾಸಿ ಮತ್ತು ಕೈಗಾರಿಕೋದ್ಯಮಿ ಜಮ್ನಾಲಾಲ್ ಬಜಾಜ್ ಅವರ ಮೊಮ್ಮಗ ಭರತ್ ನಾರಾಯಣ್ ಕೊಡುಗೆಯಾಗಿ ನೀಡಿದ್ದು, ಚಿತಾಭಸ್ಮವನ್ನು ಸೂಕ್ತವಾಗಿ ರಕ್ಷಿಸಬೇಕೆಂದು ಬಯಸಿದ್ದಾರೆ.
|