ರಾಜಕೀಯ ನಾಯಕರು, ವಕೀಲರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ದೂರವಾಣಿಯನ್ನು ಕದ್ದಾಲಿಸಲು ಕರುಣಾನಿಧಿ ಸರ್ಕಾರ ಗುಪ್ತಚರ ಸಿಬ್ಬಂದಿಯನ್ನು ಬಳಸುತ್ತಿದೆಯೆಂಬ ಆರೋಪವನ್ನು ಸರ್ಕಾರ ನಿರಾಕರಿಸಿದ್ದರೂ, ತಮಿಳುನಾಡಿನಲ್ಲಿ ಈ ವರದಿಯು ರಾಜಕೀಯ ಕಾವನ್ನು ಏರಿಸಿದೆ. ಅನೇಕ ರಾಜಕೀಯ ನಾಯಕರು, ಪೊಲೀಸ್ ಅಧಿಕಾರಿಗಳು, ವಕೀಲರು ಮತ್ತು ಪತ್ರಕರ್ತರ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸಲು ತನ್ನ ಗುಪ್ತಚರ ದಳವನ್ನು ಬಳಸಿಕೊಳ್ಳುವ ಮೂಲಕ ಆಡಳಿತಾರೂಢ ಡಿಎಂಕೆ ದೊಡ್ಡಣ್ಣನ ಪಾತ್ರವನ್ನು ವಹಿಸುತ್ತಿದೆಯೆಂದು ವರದಿಯಲ್ಲಿ ಆರೋಪಿಸಲಾಗಿದೆ.
ವಿಧಾನಸಭೆಯಲ್ಲಿ ಈ ಆರೋಪವನ್ನು ಮುಖ್ಯಮಂತ್ರಿ ಕರುಣಾನಿಧಿ ನಿರಾಕರಿಸಿದ್ದರೂ, ತಮಿಳುನಾಡು ವಾಟರ್‌ಗೇಟ್ ಎಂದು ಕರೆಯಲಾದ ಈ ಹಗರಣದ ಬಗ್ಗೆ ತನ್ನ ಮಿತ್ರಪಕ್ಷಗಳಿಗೆ ಮನದಟ್ಟು ಮಾಡಲು ಕರುಣಾನಿಧಿಗೆ ಕಷ್ಟವಾಗುತ್ತಿದೆ.
"ನಮ್ಮ ದೂರವಾಣಿಯನ್ನು ನೀವು ಏಕೆ ಕದ್ದಾಲಿಸುತ್ತಿದ್ದೀರಿ? ಇದೇನು ಸರ್ವಾಧಿಕಾರ ಸರ್ಕಾರವೇ? ನಾವೇನು ಭಯೋತ್ಪಾದಕರೇ" ಎಂದು ಪಿಎಂಕೆ ಸಂಸ್ಥಾಪಕ ರಾಮದಾಸ್ ಪ್ರಶ್ನಿಸಿದ್ದಾರೆ.
ದೂರಸಂಪರ್ಕ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಉಗ್ರಗಾಮಿಗಳು ಮತ್ತು ಶಂಕಿತ ಸಮಾಜವಿರೋಧಿ ಶಕ್ತಿಗಳ ಫೋನ್‌ಗಳನ್ನು ಗೃಹಕಾರ್ಯದರ್ಶಿ ಲಿಖಿತ ಅನುಮತಿ ನೀಡಿದ ಬಳಿಕ ಮಾತ್ರ ಕದ್ದಾಲಿಸಬಹುದು. ತಮಿಳುನಾಡು ಪೊಲೀಸರು ಈ ನಿಯಮವನ್ನು ಅನುಸರಿಸದೇ ತನ್ನ ಕಣ್ಗಾವಲು ಪಟ್ಟಿಯಲ್ಲಿ ಅನೇಕ ಪ್ರಮುಖ ವ್ಯಕ್ತಿಗಳನ್ನು ಇರಿಸಿತ್ತು.
|