ಹೇಯ ಅಪರಾಧಗಳಾದ ಡಕಾಯಿತಿ, ಹಣದ ಅವ್ಯವಹಾರ ಮತ್ತು ವಿಶೇಷವಾಗಿ ಮಹಿಳೆಯರ ವಿರುದ್ಧ ಅನೈತಿಕ ವರ್ತನೆ ತೋರುವ ಅಪರಾಧಗಳಿಗೆ ಅನುಕರಣೀಯ ಶಿಕ್ಷೆ ನೀಡುವುದಾಗಿ ಮತ್ತು ಆರೋಪಿಗೆ ಯಾವುದೇ ಸಹಾನುಭೂತಿ ತೋರಿಸಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಇಂತಹ ಅಪರಾಧಗಳು ಸಾಮಾಜಿಕ ಚೌಕಟ್ಟಿಗೆ ಮತ್ತು ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯ ಒಡ್ಡುವುದರಿಂದ, ಅಪರಾಧವೆಸಗಿ ದೀರ್ಘಕಾಲ ಕಳೆದಿದ್ದು, ಬಿಡುಗಡೆ ಮಾಡಬೇಕೆಂದು ಕೋರುವ ಅರ್ಜಿಯ ಬಗ್ಗೆ ಸಹಾನುಭೂತಿಯ ನಿಲುವನ್ನು ತಾಳಬಾರದೆಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರಿದ್ದ ಪೀಠವು ಹಿಂದಿನ ಸುಪ್ರೀಂಕೋರ್ಟ್ ತೀರ್ಪನ್ನು ನೆನಪಿಸಿಕೊಳ್ಳುತ್ತಾ ಹೇಳಿದೆ.
ಕರ್ನಾಟಕದ ಕೋಲಾರ ಜಿಲ್ಲೆಯ ಹೆದ್ದಾರಿಯಲ್ಲಿ ಸಂಭವಿಸಿದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ಮತ್ತಿತರ ಆರೋಪಿಗಳಿಗೆ ನೀಡಿದ 10 ವರ್ಷಗಳ ಶಿಕ್ಷೆಯ ಬಗ್ಗೆ ಮಧ್ಯಪ್ರವೇಶಿಸಲು ನಿರಾಕರಿಸಿದ ಕೋರ್ಟ್ ಮೇಲಿನ ತೀರ್ಪನ್ನು ನೀಡಿದೆ.
ಈ ಆರೋಪಿಗಳು ಮಹಿಳೆ ಸೇರಿದಂತೆ ಇನ್ನೂ ಕೆಲವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿದ್ದಲ್ಲದೇ ಅವರನ್ನು ಕಟ್ಟಿಹಾಕಿ ಆಭರಣಗಳನ್ನು ಕಿತ್ತುಕೊಂಡಿದ್ದರು. ಆರೋಪಿಗಳನ್ನು ಬಂಧಿಸಿ ಅವರಿಗೆ ಸೆಷನ್ಸ್ ಕೋರ್ಟ್ 10 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿದ ಬಳಿಕ ಕರ್ನಾಟಕ ಹೈಕೋರ್ಟ್ ಶಿಕ್ಷೆಯನ್ನು ದೃಢಪಡಿಸಿತ್ತು. ತಮ್ಮ ಮೇಲ್ಮನವಿಯಲ್ಲಿ ತಾವು ನಿರ್ದೋಷಿಗಳೆಂದು ಹೇಳಿರುವ ಆರೋಪಿಗಳು ಈಗಾಗಲೇ 8 ವರ್ಷಗಳ ಶಿಕ್ಷೆ ಅನುಭವಿಸಿದ್ದು, ತಮ್ಮನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದರು.
|