ಎಲ್‌ಟಿಟಿಈ ಪರ ಮೃದು ಧೋರಣೆ ತಾಳಿದ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಪ್ರತ್ಯಾರೋಪ ಮಾಡಿರುವ ಡಿಎಂಕೆ ನಾಯಕ ಮತ್ತು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ನಿರಾಧಾರ ಆರೋಪದ ಮೇಲೆ ನಮ್ಮನ್ನು ಕಿತ್ತೊಗೆಯುವ ಪ್ರಯತ್ನ ಮಾಡಿದರೆ ಅಂತಹ ಸವಾಲಿಗೆ ನಾನು ಸಿದ್ಧ. ಈ ರೀತಿಯ ಸವಾಲುಗಳನ್ನು ನನ್ನ ರಾಜಕೀಯ ಜೀವನದಲ್ಲಿ ಹಲವಾರು ಬಾರಿ ಎದುರಿಸಿದ್ದನೆ ಎಂದು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ. ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಮ್ ಅವರು ತಮಿಳು ನಾಡು ತಮಿಳು ಪ್ರತ್ಯೆಕತಾವಾದಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದ ನಂತರ ಮುಖ್ಯಮಂತ್ರಿ ಕರುಣಾನಿಧಿ ಅವರು ಪಿ. ಚಿದಂಬರಮ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಎಂ.ಕೃಷ್ಣಸ್ವಾಮಿ, ಕೇಂದ್ರದ ರಾಜ್ಯ ಖಾತೆ ಸಚಿವ ಇ.ವಿ.ಕೆ. ಎಸ್ ಇಳಂಗೊವನ್ ವಿರುದ್ಧ ಹರಿಹಾಯ್ದಿದ್ದಾರೆ.
ರಾಷ್ಟ್ರದ ಏಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ದಿವಂಗತ ನಾಯಕ ಅನ್ನಾ ಅವರು ಸ್ವತಂತ್ರ ದ್ರಾವಿಡ ನಾಡಿನ ಪರಿಕಲ್ಪನೆಯನ್ನು ಕೈಬಿಟ್ಟಿದ್ದಾರೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ತಮಿಳುನಾಡಿನ ನೆಲವನ್ನು ಬಳಸಿಕೊಳ್ಳುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಕಾರ್ಯದರ್ಶಿ ಎಂ. ಷಣ್ಮುಗನಾಥನ್ ಅವರ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಮ್ ಅವರೊಂದಿಗೆ ನಡೆಸಿದ ಟೆಲಿಫೋನ್ ಮಾತುಕತೆಯ ವಿವರವನ್ನು ನಿಡಿದ ಅವರು ಎಲ್‌ಟಿಟಿಇ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಸ್ಪೋಟಕ ವಸ್ತುಗಳನ್ನು ಸಾಗಿಸಲು ಪ್ರಯತ್ನಿಸುತ್ತಿದ್ದ 12 ತಮಿಳು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿ ನಿರಾಧಾರ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
|