ಅಣ್ವಸ್ತ್ರ ಶಕ್ತ ರಾಷ್ಟ್ರಗಳ ಪಟ್ಟಿಗೆ ಹೊಸ ದೇಶಗಳು ಸೇರಿಕೊಳ್ಳುವುದನ್ನು ಪ್ರಬಲವಾಗಿ ವಿರೋಧಿಸಿರುವ ಭಾರತ, ಇದರಿಂದ ಅಂತಾರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದೆ. ಪರಮಾಣು ಶಸ್ತ್ರಾಸ್ತ್ರಗಳು ಸರಕಾರೇತರರ ಕೈಗೆ ಸಿಲುಕಿಕೊಳ್ಳುವ ಬಗ್ಗೆಯೂ ಭಾರತ ಗಂಭೀರ ಕಳವಳ ವ್ಯಕ್ತಪಡಿಸಿತು.
ಹೆಚ್ಚುವರಿ ಅಣ್ವಸ್ತ್ರ ಶಕ್ತ ರಾಷ್ಟ್ರಗಳ ಸೇರ್ಪಡೆ ನಮಗೆ ಬೇಕಿಲ್ಲ. ಇದರಿಂದ ಅಂತಾರಾಷ್ಟ್ರೀಯ ಭದ್ರತೆಗೆ ಅಪಾಯವಿರುತ್ತದೆ ಎಂದು 10ನೇ ಏಷ್ಯಾ ಭದ್ರತಾ ಸಮಾವೇಶವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಇರಾನ್ ಹೆಸರು ಉಲ್ಲೇಖಿಸದೆ ನುಡಿದರು.
ವಿಶ್ವವು ಅಣ್ವಸ್ತ್ರ ಮುಕ್ತವಾಗಿಸುವುದೇ ಭಾರತದ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಅಣ್ವಸ್ತ್ರ ಪ್ರಸರಣದ ಬೆದರಿಕೆಯೇ ಗಂಭೀರ ಚಿಂತೆಯ ಸಂಗತಿಯಾಗಿದೆ ಎಂದು ಹೇಳಿದರು.
ಇದು ಅಣ್ವಸ್ತ್ರ ಸಾಮರ್ಥ್ಯ ಪಡೆಯುವ ಹೊಸ ರಾಷ್ಟ್ರಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಪರಮಾಣು ಅಸ್ತ್ರಗಳ ಮೇಲೆ ಭಯೋತ್ಪಾದಕ ಸಂಘಟನೆಗಳ ಹಸ್ತವೂ ಚಾಚಿದ್ದು, ಕಳವಳಕಾರಿ ವಿಷಯ ಎಂದ ಪ್ರಣಬ್, ಈ ಎರಡು ಭದ್ರತಾ ಸವಾಲುಗಳು ಪರಸ್ಪರ ಸಂಬಂಧ ಹೊಂದಿದೆ ಎಂದು ನುಡಿದರು.
ಪೂರೈಕೆ ವಿಭಾಗದಲ್ಲಿ, ಅಣ್ವಸ್ತ್ರ ಪ್ರಸರಣ ಸಮಸ್ಯೆಯು ಎರಡು ವಿಭಾಗಗಳನ್ನು ಹೊಂದಿದೆ. ಒಂದು - ಸಮೂಹ ವಿನಾಶಕ ಶಸ್ತ್ರಾಸ್ತ್ರಗಳನ್ನು ಹೊಂದುವ ಪ್ರಯತ್ನಗಳ ವಿರುದ್ಧ ತಮ್ಮ ಅಣ್ವಸ್ತ್ರ ಸಾಮಗ್ರಿ, ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ರಕ್ಷಿಸಿಕೊಳ್ಳುವಲ್ಲಿ ರಾಷ್ಟ್ರಗಳ ಅಸಮರ್ಥತೆ. ಎರಡನೆಯದು ದೇಶಗಳಿಂದಲೇ ಉದ್ದೇಶಪೂರ್ವಕ ಅಣ್ವಸ್ತ್ರ ಪ್ರಸರಣ ಎಂದವರು ಹೇಳಿದರು.
|