ದೇಶಾದ್ಯಂತ ರಥ ಯಾತ್ರೆ ಮೂಲಕ ಸರಣಿ ಸಮಾವೇಶಗಳ್ನು ನಡೆಸಲು ಉದ್ಯುಕ್ತವಾಗಿರುವ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಗೆ ಗಂಭೀರ ಭದ್ರತಾ ಬೆದರಿಕೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿದ್ದು, ಇದು ಅವರ ಸಮಾವೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಆದರೆ ಬೆದರಿಕೆಯ ಹೊರತಾಗಿಯೂ ಆಡ್ವಾಣಿ ತಮ್ಮ 'ಸಂಕಲ್ಪ ಯಾತ್ರೆ'ಯನ್ನು ಬುಧವಾರ ಜಬಲ್ಪುರದಿಂದ ಆರಂಭಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರು ಆಡ್ವಾಣಿ ಜತೆ ಮಾತುಕತೆ ನಡೆಸಿ, ಅವರಿಗೆ ಮತ್ತು ಇತರ ಇಬ್ಬರು ಮುಖಂಡರಿಗೆ ಇರುವ ಗಂಭೀರ ಭದ್ರತಾ ಬೆದರಿಕೆಗಳ ಕುರಿತು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಫೆ.10ರಂದು ರಾಮಪುರದಲ್ಲಿ ನಡೆಯುವ ಸಮಾವೇಶವೂ ಸೇರಿದಂತೆ ಬಿಜೆಪಿಯು ಉಳಿದ ಎಲ್ಲಾ ಸಭೆಗಳನ್ನು ರದ್ದುಪಡಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಆಡ್ವಾಣಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಆಡ್ವಾಣಿಯಲ್ಲದೆ, ಉಗ್ರಗಾಮಿಗಳಿಂದ ಬೆದರಿಕೆ ಇರುವ ಇತರ ಇಬ್ಬರು ಪ್ರಮುಖರೆಂದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್.
|