ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಖಾಸಗಿ ವಲಯಗಳ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಖಚಿತಪಡಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಬುಧವಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಶಾಸನ ರೂಪಿಸುವ ಬದಲಿಗೆ, ಖಾಸಗಿ ವಲಯದ ಧನಾತ್ಮಸ ಪ್ರಕ್ರಿಯೆಗೆ ಆದ್ಯತೆ ನೀಡಿದ್ದ ಕೇಂದ್ರದ ಯುಪಿಎ ಸರಕಾರ ನಿಲುವಿಗೆ ವಿರುದ್ಧವಾಗಿ ಮಾಯವತಿಯವರ ಒತ್ತಾಯ ವ್ಯಕ್ತವಾಗಿದೆ.
ಮೀಸಲಾತಿ ನೀತಿಯನ್ನು ಖಾಸಗಿ ಮತ್ತು ಇತರ ವಲಯಗಳಿಗೂ ವಿಸ್ತರಿಸಬೇಕು ಮತ್ತು ಇದನ್ನು ಸಂವಿಧಾನದ 9ನೆ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ಅವರು ಹಲವಾರು ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಹೇಳಿದ್ದಾರೆ.
ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಮತ್ತು ಕರ್ನಾಟಕದಲ್ಲಿ ಈ ವರ್ಷ ನಡೆಲಿರುವ ವಿಧಾನ ಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭೆಗೆ ನಡೆಯಲಿರುವ ಮಹಾ ಚುನಾವಣೆಯ ಪೂರ್ವಾಭಾವಿಯಾಗಿ ಈ ಜಾಹೀರಾತು ಕಾಣಿಸಿಕೊಂಡಿದ್ದು, ಹಿಂದುಳಿದ ವರ್ಗಗಳನ್ನು ಓಲೈಸಲು ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಉದ್ಯುಕ್ತವಾಗಿದ್ದಾರೆ.
ಮೇಲ್ವರ್ಗದ ಬಡ ಜನತೆ ಮತ್ತು ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನ ಅಪ್ಪಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನೂ ಸಹ ಸೇರಿಸಿಕೊಳ್ಳುವ ಮೂಲಕ ಉದ್ಯೋಗ ಮೀಸಲಾತಿ ಕಕ್ಷೆಯನ್ನು ವಿಸ್ತರಿಬೇಕು ಎಂದೂ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಖಾಸಗಿ ವಲಯದ ಮೀಸಲಾತಿ ನೀತಿಯನ್ನು, ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಷ್ಟಕರವಾಗುವಂತೆ ಅದನ್ನು ಸಂವಿಧಾನದ 9ನೆ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ಮಾಯಾವತಿ ಇಚ್ಛಿಸಿದ್ದಾರೆ.
|