ಭಾರತೀಯ ವಿದ್ಯಾರ್ಥಿ ಇಸ್ಲಾಮಿ ಚಳುವಳಿ ಸಂಘಟನೆ(ಸಿಮಿ) ಮೇಲಿನ ನಿಷೇಧವನ್ನು ವಿಸ್ತರಿಸಲು ಕೇಂದ್ರ ಸರಕಾರ ಮಂಗಳವಾರ ನಿರ್ಧರಿಸಿದೆ.
ಭಯೋತ್ಪಾದನೆ ಮತ್ತು ರಾಷ್ಟ್ರವಿರೋಧಿ ಕಾರ್ಯದಲ್ಲಿ ತೊಡಗಿದೆ ಎಂಬ ಹಿನ್ನೆಲೆಯಲ್ಲಿ ಭದ್ರತಾ ಸಂಪುಟ ಸಮಿತಿಯು ಸಂಘಟನೆಯನ್ನು ನಿಷೇಧಿಸಲು ನಿರ್ಧರಿಸಿದೆ. ರಹಸ್ಯ ಕಾರ್ಯಾಚರಣೆ ಮತ್ತು ಹಲವು ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಮತ್ತೆ ಅವುಗಳ ಮೂಲಕ ಕಾರ್ಯಾಚರಿಸುತ್ತಿದೆ ಎಂದು ಸಿಮಿಯನ್ನು ನಿಷೇಧಿಸಲಾಗಿತ್ತು.
ಗೃಹಸಚಿವಾಲಯವು 2006 ಫೆಬ್ರವರಿಯಲ್ಲಿ ಅಧಿಸೂಚನೆ ನೀಡಿ ತೃತೀಯ ಬಾರಿಗೆ ಸಿಮಿಯನ್ನು ನಿಷೇಧಿಸಿತ್ತು. ಪ್ರಥಮವಾಗಿ 2001ರ ಸೆಪ್ಟೆಂಬರ್ 27ರಂದು ಸಂಘಟನೆಯ ಮೇಲೆ ನಿಷೇಧ ಹೇರಲಾಗಿತ್ತು. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರದ ಮೇಲೆ ಸೆಪ್ಟೆಂಬರ್ 11ರಂದು ದಾಳಿ ನಡೆಸಿದ ಬಳಿಕ ಸಿಮಿ ಮೊದಲ ಬಾರಿಗೆ ನಿಷೇಧಕ್ಕೊಳಗಾಯಿತು.
2001ರ ಸೆಪ್ಟೆಂಬರ್ 27ರಿಂದ 2003ರ ಸೆಪ್ಟೆಂಬರ್ 27ರ ಅವಧಿಯ ತನಕದ ನಿಷೇಧದ ವೇಳೆ ಈ ಸಂಘಟನೆಯ ಸದಸ್ಯರ ವಿರುದ್ಧ ಹಲವಾರು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಯೋತ್ಪಾನೆ ಮತ್ತು ವಿಧ್ವಂಸಕ ಕೃತ್ಯಗಳ ತಡೆ ಕಾಯ್ದೆ (ಟಾಡಾ) ಸಂಘಟಿತ ಅಪರಾಧಗಳ ಮಹಾರಾಷ್ಟ್ರ ನಿಯಂತ್ರಣ ಕಾಯ್ದೆ (ಮೋಕಾ) ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, 1967ರ ನಿಬಂಧನೆಗಳ ಪ್ರಕಾರ ಇವರ ವಿರುದ್ಧ ಕ್ರಮ ಜರುಗಿಸಲಾಗಿತ್ತು.
ಸಿಮಿಯ ವಿರುದ್ಧ ಹೇರಲಾಗಿದ್ದ ದ್ವಿತೀಯ ನಿಷೇಧವು 2007ರ ಸೆಪ್ಟೆಂಬರ್ 27ರಂದು ಅಂತ್ಯಗೊಂಡಿತ್ತು.
|