ನೇಪಾಳದಲ್ಲಿ ಗುರವಾರ ಸಾಯಂಕಾಲ ಪೊಲೀಸರ ಬಲೆಗೆ ಬಿದ್ದಿರುವ ಕಿಡ್ನಿಕಸಿ ಜಾಲದ ರೂವಾರಿ ವೈದ್ಯ ಅಮಿತ್ ಕುಮಾರ್, ಪ್ರಾಥಮಿಕ ತನಿಖೆಯ ವೇಳೆಗೆ ತಾನು ದುಷ್ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ನಾಲ್ಕು ವೈದ್ಯರ ತಂಡದ ಸಹಾಯದಿಂದ ಸುಮಾರು 300-400 ಕಿಡ್ನಿ ಕಸಿ ಮಾಡಿರುವುದಾಗಿ ಹೇಳಿದ್ದಾನೆ.
ಕಾಠ್ಮಂಡು ಸಮೀಪದ ಹೋಟೇಲೊಂದರಲ್ಲಿ ಬಂಧನಕ್ಕೀಡಾದ ಅಮಿತ್‌ನನ್ನು ಕಾಠ್ಮಂಡು ಪೊಲೀಸರು ಹನುಮನದೋಕ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿದ್ದಾರೆ.
ಸಂತೋಷ್ ರಾವುತ್ ಅಲಿಯಾಸ್ ಡಾ|ಅಮಿತ್ ಕುಮಾರ್, ತನ್ನ ಕಿಡ್ನಿ ಮಾರಾಟ ಜಾಲವನ್ನು ಏಜೆಂಟ್ ಪಂಕಜ್ ಜಾ ಎಂಬಾತನ ಸಹಾಯದೊಂದಿಗೆ ಭಾರತದಿಂದ ನೇಪಾಳಕ್ಕೆ ಸ್ಥಳಾಂತರಿಸಲು ಯೋಜಿಸಿದ್ದ. ರಾಷ್ಟ್ರವನ್ನು ತಲ್ಲಣಗೊಳಿಸಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ ಅಮಿತ್ ಕುಮಾರ್, ಕೆ.ಕೆ.ಅಗರ್ವಾಲ್ ಮತ್ತು ಉಪೇಂದ್ರ ಎಂಬ ಮೂವರು ವೈದ್ಯರುಗಳನ್ನು ಬಂಧಿಸಲಾಗಿದ್ದು, ಇನ್ನೋರ್ವ ವೈದ್ಯ ನವದೆಹಲಿ ನಿವಾಸಿ ಸಾರಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಪ್ರಮುಖ ಆರೋಪಿಯನ್ನು ಇನ್ನು ಎರಡು-ಮೂರು ದಿನಗಳೊಳಗಾಗಿ ದೆಹಲಿಗೆ ಕರೆತರಲಾಗುವುದು ಎಂದು ಮೂಲಗಳು ಹೇಳಿವೆ. ಪ್ರಕರಣದ ತನಿಖೆಯನ್ನು ಶೀಘ್ರ ಕೈಗೆತ್ತಿಕೊಳ್ಳವುದಾಗಿ ಸಿಬಿಐ ನಿರ್ದೇಶಕರು ಹೇಳಿದ್ದಾರೆ.
ಕಾಠ್ಮಂಡು ಸಮೀಪದ ಸೌರಾಹ ಕ್ಯಾಂಪ್ ಸಮೀಪದ ಹೋಟೇಲ್ ವೈಲ್ಡ್‌ಲೈಫ್ ಕ್ಯಾಂಪ್‍ನಲ್ಲಿ ಗುರವಾರ ಸಾಯಂಕಾಲ ಐದು ಗಂಟೆಯ ವೇಳೆಗೆ ಅಮಿತ್‌ನನ್ನು ಬಂಧಿಸಲಾಗಿತ್ತು. ಈತ ಕೊಠಡಿ ಸಂಖ್ಯೆ ಆರರಲ್ಲಿ ಮಣಿ ಸಿಂಗ್ ಎಂಬ ಹೆಸರಿನಲ್ಲಿ ತಂಗಿದ್ದ. ಆತನ ಸ್ನೇಹಿತ ಮನಿಶ್ ಪೊಲೀಸ್ ದಾಳಿಯ ವೇಳೆ ತಪ್ಪಿಸಿಕೊಂಡಿದ್ದ.
ಬಂಧಿತ ಅಮಿತ್‌ನಿಂದ ಪೊಲೀಸರು ಭಾರೀ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 9 ಲಕ್ಷ ಯೂರೋ, 1 ಲಕ್ಷ ಡಾಲರ್ ಮತ್ತು 40- ಸಾವಿರ ನೇಪಾಳಿ ಕರೆನ್ಸಿ ಸೇರಿದೆ.
|