ತನ್ನ ವೀಸಾ ಅವಧಿ ಕೊನೆಗೊಳ್ಳಲು ಕೇವಲ ಎಂಟು ದಿನ ಉಳಿದಿರುವಂತೆ, ಚಿಂತಾಕ್ರಾಂತವಾಗಿರುವ ಬಾಂಗ್ಲಾದೇಶದ ವಿವಾದಾಸ್ಪದ ಲೇಖಕಿ ತಸ್ಲಿಮಾ ನಸ್ರೀನ್, ಭಾರತವು ತನ್ನ ವಿರುದ್ಧ 'ಬೆನ್ನು ತಿರುಗಿಸದು' ಮತ್ತು ಅದು ತನ್ನ ಇರುವಿಕೆಯನ್ನು ಸರಾಗಗೊಳಿಸಲು ವೀಸಾ ಅವಧಿಯನ್ನು ವಿಸ್ತರಿಸಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. 'ಭಾರತವು ಜನತೆಯ ಭಾವನೆಗಳನ್ನು ಗೌರವಿಸುವ ತನಕ ಅತಿಥಿಗಳನ್ನು ಸ್ವಾಗತಿಸುತ್ತದೆ" ಎಂಬುದಾಗಿ ರಾಷ್ಟ್ರದ ಪ್ರತಿಷ್ಠೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯೂ ಸಹ ಹರಿತ ಲೇಖನಿಯ ತಸ್ಲಿಮಾ ಅವರ ಆಶಾವಾದಕ್ಕೆ ಇಂಬು ನೀಡಿದೆ.
"ನಾನು ಯಾವಾಗಲೂ ನನ್ನ ಇರುವಿಕೆಯ ಬಗ್ಗೆ ಆಲೋಚಿಸುತ್ತಿದ್ದೇನೆ. ನನ್ನ ವೀಸಾ ಅವಧಿ ಅಂತಿಮಗೊಳ್ಳುವ ಎಂಟು ದಿವಸಕ್ಕೆ ಮುಂಚಿತವಾಗಿ ಸರಕಾರವು ಅವಧಿಯನ್ನು ವಿಸ್ತರಿಸಬಹುದು" ಎಂದು ಅವರು ನೆಲೆಸಿರುವ ಸುರಕ್ಷಿತ ತಾಣದಿಂದ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
"ಒಂದೊಮ್ಮೆ ಭಾರತವು ತನಗೆ ಬೆನ್ನು ತಿರುವಿದರೆ, ನನಗೆ ತೆರಳಲು ಜಾಗವಿಲ್ಲ, ಜೀವನಕ್ಕೆ ಆಧಾರವಿಲ್ಲ. ಇಷ್ಟೆಲ್ಲ ನಡೆದರೂ, ಓರ್ವ ಶ್ರದ್ಧೆಯ, ಪ್ರಾಮಾಣಿಕ, ಜಾತ್ಯತೀತ ಬರಹಗಾರನಿಗೆ ಭಾರತವು ಸುರಕ್ಷಿತ ಮತ್ತು ಏಕಮಾತ್ರ ಆಶ್ರಯ ತಾಣ" ಎಂಬುದಾಗಿ ತಾನು ಇನ್ನೂ ಕನಸು ಕಾಣುತ್ತಿರುವುದಾಗಿ ತಸ್ಲಿಮಾ ಹೇಳಿದ್ದಾರೆ.
ಈ ವಿವಾದಾಸ್ಪದ ಲೇಖಕಿಯ ವಿರುದ್ಧ ಬಾಂಗ್ಲಾ ದೇಶವು 1994ರಲ್ಲಿ ಫತ್ವಾ ಹೊರಡಿಸಿದ ಬಳಿಕ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
|