ಮೊಹಾಲಿಯಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಶನಿವಾರ ಅಪರಾಹ್ನ ಭಾರೀ ಅಗ್ನಿ ದುರಂತ ಸಂಭವಿಸಿದೆ. ಎಸಿ ಕೊಠಡಿಯಲ್ಲಿ ಭುಗಿಲೆದ್ದ ಬೆಂಕಿ ಬಳಿಕ ಮಾಧ್ಯಮ ಗ್ಯಾಲರಿಗೆ ಹಬ್ಬಿತು ಎಂದು ವರದಿ ತಿಳಿಸಿದೆ.
ಈ ಅಪಘಾತಕ್ಕೆ ನಿಖರ ಕಾರಣಗಳೇನು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೆಲ್ಡಿಂಗ್ ಕಾರ್ಯ ಈ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ನಂಬಲಾಗಿದೆ.
ಅಗ್ನಿಶಾಮಕ ದಳವು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಪರಿಹಾರ ಕಾರ್ಯ ಕೈಗೊಂಡಿದೆ. "ಮಧ್ಯಾಹ್ನ ಸುಮಾರು 1.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿತು. ಎಸಿ ಲಾಂಜ್ ಬಳಿ ವೆಲ್ಡಿಂಗ್ ಕಾರ್ಯನಡೆಯುತ್ತಿದ್ದು ಈ ವೇಳೆಗ ಹಾರಿದ ಕಿಡಿಯಿಂದ ಬೆಂಕಿ ಹತ್ತಿಕೊಂಡು ತಕ್ಷಣ ಎಲ್ಲೆಡೆ ಹಬ್ಬಿತು" ಎಂದು ಪಂಜಾಬ್ ಕ್ರಿಕೆಟ್ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಗೇಡಿಯರ್ ಜಿ.ಎಸ್. ಸಂಧು ವರದಿಗಾರರಿಗೆ ತಿಳಿಸಿದ್ದಾರೆ.
ಕ್ರೀಡಾಂಗಣದ ನವೀಕರಣ ಕಾರ್ಯ ನಡೆಯುತ್ತಿರುವ ಕಾರಣ ಬೆಲೆಬಾಳುವ ವಸ್ತುಗಳನ್ನ ಸುರಕ್ಷಾ ಸ್ಥಳಕ್ಕೆ ಹಸ್ತಾಂತರಿಸಿದ್ದು ದೊಡ್ಡ ಮಟ್ಟಿನ ನಷ್ಟ ಉಂಟಾಗಿಲ್ಲ ಎಂದು ಅವರು ಹೇಳಿದ್ದಾರೆ.
ಚಂಢೀಗಡ ಮತ್ತು ಮೊಹಾಲಿಯಿಂದ ಬಂದಿರುವ ನಾಲ್ಕು ಅಗ್ನಿಶಾಮಕ ದಳಗಳು ಒಂದು ಗಂಟೆಯೊಳಗೆ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಮೊಹಾಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆರ್ಎಸ್ ಖಾತ್ರ ಹೇಳಿದ್ದಾರೆ.
|