ನೇಪಾಳದ ಹೊಟೇಲೊಂದರಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಕಿಡ್ನಿಜಾಲದ ರೂವಾರಿ ಡಾ| ಅಮಿತ್ ಕುಮಾರ್‌ನನ್ನು ಎರಡು ದಿನಗಳ ಬಳಿಕ ಭಾರತದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದ್ದು, ಆತನನ್ನು ನವದೆಹಲಿಗೆ ಕರೆತರಲಾಗಿದೆ.
ಕಾಠ್ಮಂಡುವಿನಿಂದ ದೆಹಲಿಗೆ ಬಂದಿಳಿದ ಐಸಿ 814 ವಿಮಾನದಲ್ಲಿ ಸಿಬಿಐ ಅಧಿಕಾರಿಗಳು ಅಮಿತ್‌ನನ್ನು ಕರೆ ತಂದಿದ್ದಾರೆ.
ಭಾರತ-ನೇಪಾಳ ಗಡಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕುಗ್ರಾಮದಲ್ಲಿರುವ ರೆಸಾರ್ಟ್ ಒಂದರಲ್ಲಿ ತಂಗಿದ್ದ ವೈದ್ಯನನ್ನು ಗುರುವಾರ ನೇಪಾಳ ಪೊಲೀಸರು ಬಂಧಿಸಿದ್ದರು. ಅಮಿತ್ ಗಡಿಪಾರಿಗೆ ಭಾರತವು ಔಪಚಾರಿಕ ವಿನಂತಿ ಸಲ್ಲಿಸಿದೆ ಎಂದು ನೇಪಾಳ ಸರಕಾರ ಈ ಹಿಂದೆ ಹೇಳಿತ್ತು.
ರಾಷ್ಟ್ರವನ್ನೇ ತಲ್ಲಣಗೊಳಿಸಿದ ಕಿಡ್ನಿಕಸಿ ಹಗರಣದ ರೂವಾರಿಯಾಗಿರುವ ಈತ ಪ್ರಾಥಮಿಕ ತನಿಖೆ ವೇಳೆಯಲ್ಲಿ ಸುಮಾರು 300-400 ಕಾನೂನುಬಾಹಿರ ಕಿಡ್ನಿಕಸಿ ಮಾಡಿರುವುದಾಗಿ ಒಪ್ಪಿಕೊಡಿದ್ದ.
ಈತ ನೇಪಾಳದಲ್ಲಿಯೂ ತನ್ನ ಅಕ್ರಮ ವ್ಯವಹಾರದ ಜಾಲಹೊಂದಿದ್ದಾನೆಂದು ಹೇಳಲಾಗಿದ್ದು, ಈತನನ್ನು 36 ಗಂಟೆಗಳ ಕಾಲ ಅಲ್ಲಿನ ಪೊಲೀಸರು ಪ್ರಶ್ನಿಸಿದ್ದಾರೆ. ಖಳವೈದ್ಯ ನೇಪಾಳದಲ್ಲಿ ಅತಿಥಿಗೃಹವೊಂದನ್ನು ಖರೀದಿಸಲು ಪ್ರಯತ್ನ ನಡೆಸುತ್ತಿದ್ದು, ತನ್ನ ನೆಲೆಯನ್ನು ಕಾಠ್ಮಂಡುವಿಗೆ ಸ್ಥಳಾಂತರಿಸಲು ಯತ್ನಿಸುತ್ತಿದ್ದ ಎಂಬ ಅಂಶವನ್ನು ಸುದೀರ್ಘ ತನಿಖೆಯ ವೇಳೆಗೆ ಬಾಯ್ಬಿಟ್ಟಿದ್ದಾನೆ.
|