ಉತ್ತರ ಪ್ರದೇಶದ ವಿಶೇಷ ಕಾರ್ಯಾಚರಣೆ ಪಡೆ ಎಸ್ಟಿಎಫ್ ಬಂಧಿಸಿರುವ ಆರು ಮಂದಿ ಉಗ್ರರು ತನಿಖೆ ವೇಳೆ ಆಘಾತಕಾರಿ ಅಂಶಗಳನ್ನು ಹೊರಗೆಡಹಿದ್ದು, ಲಷ್ಕರ್ ಇ ತೋಯಿಬಾ ಸಂಘಟನೆಯು ಮುಂಬಯಿಯ ಚರ್ಚ್‌ಗೇಟ್ ಹಾಗೂ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಅನ್ನು ಸ್ಫೋಟಿಸಲು ಸಂಚು ಹೂಡಿದೆ ಎಂದು ಬಯಲಾಗಿದೆ.
ಇದಲ್ಲದೆ, ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ಹತ್ಯೆಗೂ ಸಂಚು ಹೂಡಿರುವುದಾಗಿ ತನಿಖೆ ವೇಳೆ ಉಗ್ರರು ಒಪ್ಪಿಕೊಂಡಿರುವುದಾಗಿ ಮೂಲಗಳು ವರದಿ ಮಾಡಿವೆ.
ಬಂಧಿತರಲ್ಲಿ ಒಬ್ಬನ ಹೊರತಾಗಿ ಉಳಿದವರೆಲ್ಲರೂ ಶಸ್ತ್ರಾಸ್ತ್ರಗಳನ್ನು, ಸ್ಫೋಟಕಗಳನ್ನು ಪ್ರಯೋಗುಸುವುದು ಹೇಗೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗೌಪ್ಯ ಮಾಹಿತಿಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬಿತ್ಯಾದಿಗಳ ಕುರಿತು ತರಬೇತಿ ನೀಡಲಾಗಿತ್ತು ಎಂದು ಉ.ಪ್ರ. ಡಿಜಿಪಿ ವಿಕ್ರಂ ಸಿಂಗ್ ತಿಳಿಸಿದ್ದಾರೆ.
ಜನವರಿ 1ರಂದು ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ ದಾಳಿಯಲ್ಲೂ ಭಾಗವಹಿಸಿದ್ದ ಬಂಧಿತರಲ್ಲೊಬ್ಬ, 2005ರಲ್ಲಿ ಬೆಂಗಳೂರಿನ ಐಐಎಸ್ಸಿ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ.
ಬಂಧಿತ ಉಗ್ರರು ಎರಡು ತಂಡಗಳಲ್ಲಿ ನವದೆಹಲಿ ಮತ್ತು ಆಗ್ರಾ ಮೂಲಕವಾಗಿ ಮುಂಬಯಿ ತಲುಪುವ ಯೋಜನೆಯಿತ್ತು. ಅಲ್ಲಿ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಚರ್ಚ್‌ಗೇಟ್ ಸ್ಟೇಶನ್ ಅವರ ಗುರಿಯಾಗಿತ್ತು.
ರಾಮಪುರದಲ್ಲಿ ಬಂಧಿತರಾದವರೆಂದರೆ ರಾವಲ್ಪಿಂಡಿಯ ಫಾಹಿಮ್ ಅಹ್ಮದ್ ಮತ್ತು ಉತ್ತರ ಪ್ರದೇಶದವರಾದ ಮಹಮದ್ ಶರೀಫ್ ಹಾಗೂ ಜಂಗ್ ಬಹಾದೂರ್. ಲಖ್ನೋದಲ್ಲಿ ಬಂಧಿತ ಲಷ್ಕರ್ ಉಗ್ರನನ್ನು ಬಿಹಾರದ ಮಧು ಬನಿಯ ಅಬು ಕಾಸಿಂ, ಪಾಕಸ್ತಾನದ ಗುಜ್ರಾನವಾಲಾದ ಅಬು ಜಾರ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದವನಾದ ಅಬು ಸಮಾ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಮೂರು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳಲ್ಲದೆ, ಎರಡು ಎ.ಕೆ. ರೈಫಲ್‌ಗಳು, ಲೋಡ್ ಆಗಿರುವ ಮ್ಯಾಗಜಿನ್, ಐದು ಕೈಬಾಂಬ್‌ಗಳು, ಒಂದು .30 ಪಿಸ್ತೂಲ್ ಮತ್ತು ಮುಂಬಯಿಗೆ ನವದೆಹಲಿ ಮತ್ತು ಆಗ್ರಾದಿಂದ ತೆರಳುವ ರೈಲಿನ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
|