ಮುಂಬಯಿಯಲ್ಲಿರುವ ವಲಸಿಗ ಉದ್ಯೋಗಸ್ಥರ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿರುವ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆಯ ವಿರುದ್ಧ ಕ್ರಮ ಆರಂಭಗೊಳಿಸಲಾಗಿದ್ದರೂ, ಉತ್ತರ ಭಾರತದ ವಲಸಿಗರು ಇನ್ನೂ ಭೀತಿಯಲ್ಲಿದ್ದಾರೆ. ನಾಸಿಕ್‌ನಲ್ಲಿರು ವಲಸಿಗರು ತಮ್ಮ ಉದ್ಯೋಗ ತೊರೆದು ಜಾಗಖಾಲಿ ಮಾಡುತ್ತಿದ್ದಾರೆ.
ಉತ್ತರ ಭಾರತೀಯರ ವಿರುದ್ಧದ ರಾಜ್ ಠಾಕ್ರೆ ಹೇಳಿಕೆಯು ಶಾಂತಿನಗರದಲ್ಲಿ ಅಶಾಂತಿ ತಂದಿಟ್ಟಿದೆ. ಹಲವಾರು ಮಂದಿ ಕೆಲಸವೂ ಬೇಡ, ಏನೂ ಬೇಡ, ಜೀವ ಉಳಿದರೆ ಸಾಕು ಎಂಬಂತೆ ಗಂಟುಮೂಟೆ ಕಟ್ಟಿ ತೆರಳಿದ್ದಾರೆ.
"ಅವರು ಪ್ರತಿರಾತ್ರಿ ಇಲ್ಲಿ ಬರುತ್ತಾರೆ. ಅವರು ನಿಜವಾಗಿಯೂ ನಮ್ಮನ್ನು ಕೊಲ್ಲುತ್ತಾರೆ ಎಂಬುದಾಗಿ" ಭಯಭೀತಿಗೊಂಡಿರುವ ವಲಸಿಗರೊಬ್ಬರು ಹೇಳಿಕೊಂಡಿದ್ದಾರೆ. "ಅವರು ರಾತ್ರಿಯ ಹೊತ್ತಿನಲ್ಲಿ ಬಂದು ನಮ್ಮನ್ನು ಥಳಿಸಿದರು. ಮನೆಯೊಳಗಿರುವುದನ್ನೆಲ್ಲ ಮುರಿದು ಹಾಕಿದರು" ಎಂಬುದಾಗಿ ಮಹಿಳೆಯೋರ್ವಳು ಹೇಳುತ್ತಾರೆ.
ಕಾರ್ಮಿಕರು ಕೆಲಸ ತೊರೆಯುತ್ತಿರುವುದಾಗಿ ಉದ್ಯಮಿಗಳೂ ಹೇಳುತ್ತಿದ್ದಾರೆ. ಅವರು ಎಷ್ಟು ಭಯಗೊಂಡಿದ್ದಾರೆಂದರೆ, ಸಂಪೂರ್ಣ ವೇತನವನ್ನೂ ಬಯಸದೆ, ಮನೆಗೆ ಹಿಂತಿರುಗಲು ಎಷ್ಟು ಬೇಕೋ ಅಷ್ಟುಮಾತ್ರ ಪಡೆದು ಆದಷ್ಟು ಬೇಗ ಇಲ್ಲಿಂದ ತೆರಳಲು ಇಚ್ಛಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆಯನ್ನು ಸರಕಾರ ನೀಡಿದರೂ, ಇದು ನಾಸಿಕ್‌ನಲ್ಲಿ ವಲಸಿಗರ ಮರು ವಲಸೆಯನ್ನು ತಡೆಯುವಲ್ಲಿ ವಿಫಲವಾಗಿದೆ.
|