ಉತ್ತರ ಭಾರತೀಯರ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಯಾವುದೇ ಕ್ಷಣದಲ್ಲೂ ರಾಜ್ ಠಾಕ್ರೆ ಬಂಧನಕ್ಕೀಡಾಗುವ ಸಾಧ್ಯತೆ ಇದ್ದರೂ, ಠಾಕ್ರೆ ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ ಎಂದು ಎಂಎನ್ಎಸ್ ಮಂಗಳವಾರ ಹೇಳಿದೆ.
ಸೋಮವಾರ ಠಾಕ್ರೆ ಮತ್ತು ಎಸ್ಪಿ ನಾಯಕ ಅಬು ಅಸಿಂ ಅಜ್ಮಿ ವಿರುದ್ಧ ಪೊಲೀಸರು ಉದ್ರೇಕಕಾರಿ ಹೇಳಿಕೆ ನೀಡಿರುವ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲವು ಪುರಾವೆಗಳ ಆಧಾರದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಂಧನ ಅವಶ್ಯಕ ಎಂದು ಪೊಲೀಸ್ ಜಂಟಿ ಆಯುಕ್ತ (ಕಾನೂನು ಮತ್ತು ಸುವ್ಯಸ್ಥೆ) ಕೆ.ಎಲ್.ಪ್ರಸಾದ್ ಹೇಳಿದ್ದಾರೆ.
ಮುಂಬಯಿ ಉದ್ವಿಗ್ನ ಏತನ್ಮಧ್ಯೆ, ರಾಜ್ ಠಾಕ್ರೆ ಅವರ ಬಂಧನ ಯಾವುದೇ ಕ್ಷಣದಲ್ಲಿ ನಡೆಯಬಹುದಾಗಿದ್ದು, ರಾಜ್ ಬಂಧನವಾದರೆ ಹಿಂಸಾಚಾರ ಭುಗಿಲೇಳಬಹುದೆಂಬ ಭೀತಿಯಿಂದ ಮುಂಬಯಿ ಉದ್ವಿಗ್ನಗೊಂಡಿದೆ.
ರಾಜ್ ಠಾಕ್ರೆಯವರನ್ನು ಬಂಧಿಸಿ ವಿಕ್ರೋಲಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತದೆ ಎಂಬ ದಟ್ಟವದಂತಿಗಳು ಹಬ್ಬಿದ್ದು ಮುಂಬಯಿಯಲ್ಲೂ ಕೆಲವು ಅಂಗಡಿಗಳು ಬಾಗಿಲು ಮುಚ್ಚಿವೆ. ವರ್ಲಿ, ಪ್ರಭಾದೇವಿ, ಚೆಂಬೂರು, ಘಾಟ್‌ಕೋಪರ್ ಮತ್ತು ದಾದರ್‌ಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಯಿತು. ಬಳಿಕ ಪೊಲೀಸರ ಭರವಸೆಯ ಹಿನ್ನೆಲೆಯಲ್ಲಿ ಅಂಗಡಿಗಳವರು ವ್ಯಾಪಾರ ಆರಂಭಿಸಿದರು. ಉದ್ವಿಗ್ನ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ನಾಸಿಕ್‌ನಲ್ಲಿ ಉತ್ತರ ಭಾತೀಯರ ಮೇಲೆ ಹಲ್ಲೆ ನಾಸಿಕ್‌ನಲ್ಲಿ ಶಂಕಿತ ಎಂಎನ್ಎಸ್ ಕಾರ್ಯಕರ್ತರು ಉತ್ತರ ಭಾರತೀಯರ ಮೇಲೆ ಎರ್ರಾಬಿರ್ರಿಯಾಗಿ ದಾಳಿ ನಡೆಸಿದ್ದಾರೆ. ಅಂಗಡಿಗಳವರನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾಂಕುಗಳು ಮತ್ತು ಶಾಲೆಕಾಲೇಜುಗಳಿಗೆ ರಜೆ ಸಾರಲಾಗಿದೆ.
ಪುಣೆಯಲ್ಲಿ ಕೆಲವು ಎಂಎನ್ಎಸ್ ಕಾರ್ಯಕರ್ತರು ಬಸ್ಸುಗಳ ಮೇಲೆ ಕಲ್ಲೆಸೆದಿದ್ದಾರೆ.
|