ಉದ್ರೇಕಕಾರಿ ಭಾಷಣ ಮಾಡಿರುವ ಕಾರಣಕ್ಕೆ ತನ್ನ ವಿರುದ್ಧ ಪ್ರಕರಣ ದಾಖಲಾಗಿರುವ ಸಮಾಜವಾದಿ ಪಕ್ಷದ ನಾಯಕ ಅಬು ಅಸಿಮ್ ಅಜ್ಮಿ, ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ತನ್ನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಆದರೆ, ಆಜ್ಮಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಸೂಕ್ತಕಾಲದಲ್ಲಿ ಅವಶ್ಯಕತೆಗೆ ತಕ್ಕಂತೆ ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದ್ದು, ಅವರನ್ನು ಮರಳಿ ಕಳುಹಿಸಿದ್ದಾರೆ.
ಆಯುಕ್ತರ ಕಚೇರಿಯ ಎದುರುಗಡೆ ಕಾಯುತ್ತಿದ್ದ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅಜ್ಮಿ, ತನ್ನನ್ನು ಬಂಧಿಸುವಂತೆ ತಾನು ಕೇಳಿಕೊಂಡಿದ್ದಾಗಿ ನುಡಿದರು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಾದ್ಯಂತದಿಂದ ಅಸಂಖ್ಯ ದೂರವಾಣಿ ಕರೆಗಳನ್ನು ತಾನು ಸ್ವೀಕರಿಸುತ್ತಿರುವುದಾಗಿಯೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
ಉತ್ತರ ಭಾರತೀಯ ವಲಸಿಗರ ಕುರಿತಂತೆ ಉದ್ರೇಕಕಾರಿ ಮಾತುಗಳನ್ನು ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ಮತ್ತು ಅಜ್ಮಿ ಉದ್ರೇಕಕಾರಿ ಮಾತುಗಳನ್ನು ಆಡಿರುವ ಹಿನ್ನೆಲೆಯಲ್ಲಿ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಸಲ್ಲಿಸಲಾಗಿದೆ. ಉಭಯ ನಾಯಕರುಗಳ ನಿವಾಸದ 100 ಮೀಟರ್ ಸುತ್ತಮುತ್ತ ಕಳೆದ ರಾತ್ರಿಯಿಂದ ಅಪರಾಧಿ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರಡಿ ನಿಷೇಧಾಜ್ಞೆ ವಿಧಿಸಲಾಗಿದೆ.
|