ಸೋನಿಯಾಗಾಂಧಿ ಬೆಲ್ಜಿಯಂ ಗೌರವ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಅವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂಬುದಾಗಿ ನೀಡಿರುವ ದೂರಿನ ಕುರಿತು ನೋಟೀಸ್ ನೀಡುವ ವಿಚಾರದಲ್ಲಿ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳೆದ್ದಿದ್ದು, ಈ ಕುರಿತ ನಿರ್ಧಾರವನ್ನು ಮುಂದೂಡಲಾಗಿದೆ.
ಬೆಲ್ಜಿಯಂ ಗೌರವ ಸ್ವೀಕರಿಸಿರುವ ಸೋನಿಯಾ ಗಾಂಧಿಯವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಕೇರಳದ ವಕೀಲರೊಬ್ಬರು ಸಲ್ಲಿಸಿರುವ ದೂರಿನ ಬಗ್ಗೆ ಸೋನಿಯಾ ಗಾಂಧಿಯವರಿಗೆ ನೋಟೀಸ್ ನೀಡುವ ವಿಚಾರದಲ್ಲಿ ಚುನಾವಣಾ ಆಯೋಗದ ಮೂವರು ಸದಸ್ಯರ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು, ನಿರ್ಧಾರ ಒಂದನ್ನು ಕೈಗೊಳ್ಳಲಾಗಿಲ್ಲ.
ಈ ಕುರಿತ ಕಡತವನ್ನು ಚುನಾವಣಾ ಆಯುಕ್ತರೊಬ್ಬರಿಗೆ ಕಳುಹಿಸಲಾಗಿದ್ದು, ಅವರು ಇನ್ನಷ್ಟೆ ಈ ಕುರಿತು ಅಭಿಪ್ರಾಯ ನೀಡಬೇಕಿದೆ. ಆದರೆ, ಇಂತಹ ಕ್ರಮಕ್ಕೆ ಸದರಿ ಆಯುಕ್ತರು ನಕಾರ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಅಧ್ಯಕ್ಷರಿಂದ ಶಿಫಾರಸುಗೊಂಡಿರುವ ದೂರಿನ ಕುರಿತು ತ್ರಿಸದಸ್ಯದ ಚುನಾವಣಾ ಆಯೋಗವು ಒಮ್ಮತದ ನಿರ್ಧಾರ ಕೈಗೊಂಡ ಬಳಿಕ, ಆಯೋಗದ ಸಲಹೆಯಂತೆ ಅವರು ಸಂವಿಧಾನದಡಿ ಕಾರ್ಯನಿರ್ಹವಹಿಸಬೇಕು.
ಸೋನಿಯಾ ಅವರು 2006ರಲ್ಲಿ ಬೆಲ್ಜಿಯಂಗೆ ಭೇಟಿ ನೀಡಿದ್ದ ವೇಳೆ ಅವರಿಗೆ ಅಲ್ಲಿನ ದ್ವಿತೀಯ ಅತ್ಯುನ್ನತ ನಾಗರೀಕ ಪ್ರಶಸ್ತಿ 'ಆರ್ಡರ್ ಆಫ್ ಲಿಯೋಪೋಲ್ಡ್' ಹಾಗೂ ಅಲ್ಲಿನ ವಿಶ್ವವಿದ್ಯಾನಿಲಯವೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಬೆಲ್ಜಿಯಂ ಪ್ರಶಸ್ತಿಯನ್ನು ಸ್ವೀಕರಿಸುವುದು ರಾಷ್ಟ್ರದ ಸಂವಿಧಾನದ ನಿಷ್ಠೆಗೆ ವಿರುದ್ಧವಾದುದು ಎಂಬುದು ಫಿರ್ಯಾದುದಾರರ ವಾದ.
ಆದರೆ, ಕಾಂಗ್ರೆಸ್ ಈ ದೂರನ್ನು ಹಾಸ್ಯಾಸ್ಪದ ಮತ್ತು ಆಧಾರರಹಿತ ಎಂದು ಹೇಳಿದೆ.
|