ಬೂದಿಮುಚ್ಚಿದ ಕೆಂಡದಂತಿದ್ದ ಮುಂಬೈ ರಾಜ್‌ಠಾಕ್ರೆ ಬಂಧನದ ಬಳಿಕ ಭುಗಿಲೆದ್ದಿದ್ದು ಅಲ್ಲಲ್ಲಿ ಹಿಂಸಾಚಾರಗಳು ಸಂಭವಿಸಿವೆ. ರಾಜ್ ಬೆಂಬಲಿಗರು ನಾಸಿಕ್‌ನಲ್ಲಿ ನಡೆಸಿದ ಗಲಭೆವೇಳೆ ಎಚ್ಎಎಲ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಕಿಡಿಗೇಡಿಗಳು ಅವರು ಪ್ರಯಾಣಿಸುತ್ತಿದ್ದ ಸಿಬ್ಬಂದಿ ಬಸ್ಸಿಗೆ ಎಸೆದ ಕಲ್ಲಿನೇಟು ಬಡಿದು ಅವರು ಮೃತರಾಗಿದ್ದಾರೆ.
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಸಿಬ್ಬಂದಿ ಅಂಬಾದಾಸ್ ಹರಿಬಾವು(55) ಕಲ್ಲೇಟಿನಿಂದ ಮೃತರಾಗಿದ್ದಾರೆ. ಬಸ್ಸಿನ ಚಾಲಕನೂ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು, ಅವರ ಶಿವಾಜಿ ಪಾರ್ಕ್ ನಿವಾಸದಿಂದ ಬುಧವಾರ ಸಾಯಂಕಾಲ 4.15ರ ವೇಳೆ ಬಂಧಿಸಲಾಗಿತ್ತು. ಸ್ವಲ್ಪವೇ ಹೊತ್ತಿನ ಬಳಿಕ ವಿಕ್ರೋಲಿ ನ್ಯಾಯಾಲಯದ ನ್ಯಾಯಾಧೀಶರು 15 ಸಾವಿರ ರೂಪಾಯಿಯ ವೈಯಕ್ತಿಕ ಮುಚ್ಚಳಿಕೆ ಮೇಲೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದರು.
ನಿರುದ್ವಿಗ್ನರಾಗಿ ಕಂಡು ಬರುತ್ತಿದ್ದ ರಾಜ್ ಅವರನ್ನು ಬಂಧಿಸಿ ಮಾಮೂಲಿ ಪೊಲೀಸ್ ವಾಹನದಲ್ಲಿ ನೇರವಾಗಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.
ಸಂಭಾವ್ಯ ಗಲಭೆಯನ್ನು ತಪ್ಪಿಲೋಸುಗ ಸುಮಾರು 2000 ಸಾವಿರ ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿತ್ತು. ಕೇಂದ್ರದಿಂದ ಅರೆ ಸೇನಾಪಡೆಗಳನ್ನು ಕರೆಸಿಕೊಂಡು ಎಲ್ಲೆಡೆ ನಿಯೋಜಿಸಲಾಗಿತ್ತು. ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದರೂ, ನಾಸಿಕ್‌ನಲ್ಲಿ ಅಮಾಯಕರೊಬ್ಬರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
|