ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸಂಪಟವು, ಐದು ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ರಾಜ್ಯಗಳಲ್ಲಿ ಕ್ಷೇತ್ರಪುನರ್ವಿಂಗಡಣೆಗಾಗಿ ಗುರುವಾರ ಔಪಚಾರಿಕ ಅಧಿಸೂಚನೆ ನೀಡಿದೆ.
ರಾಷ್ಟ್ರದ ರಾಜಕೀಯ ನಕಾಶೆಯನ್ನೇ ಬದಲಿಸಲಿರುವ ಈ ನಿರ್ಧಾರವು ಹಲವು ರಾಜಕೀಯ ನಾಯಕರು ಪೋಷಿಸಿಕೊಂಡು ಬಂದಿರುವ ಕ್ಷೇತ್ರಗಳನ್ನು ಅವರ ಕೈಯಿಂದ ಕಿತ್ತುಕೊಳ್ಳಲಿದೆ.
ಯುಪಿಎ ಸರಕಾರವು ಈ ವಿಚಾರದ ಕುರಿತಂತೆ ಹಲವು ಸಮಯಗಳಿಂದ ಆಲೋಚಿಸುತ್ತಾ ಬಂದಿದೆ. ಆದರೆ ಕೇಂದ್ರವು ತನ್ನ ನಿಲುವನ್ನು ಎರಡು ವಾರಗಳೊಳಗಾಗಿ ಸ್ಪಷ್ಟಪಡಿಸುವಂತೆ ಫೆ.4 ರಂದು ನೀಡಿರುವ ಆದೇಶಕ್ಕೆ ಅನುಸಾರವಾಗಿ ಕೇಂದ್ರ ವರ್ತಿಸಬೇಕಾಗಿದೆ.
ರಾಷ್ಟ್ರಪತಿ ಆಳ್ವಿಕೆ ಇರುವ ಕರ್ನಾಟಕದಲ್ಲಿ ಚುನಾವಣೆಯನ್ನು ಮುಂದೂಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎಂಬ ಆಪಾದನೆಗೆ ಯುಪಿಎ ಒಳಗಾಗುತ್ತಲೇ ಬಂದಿದೆ. ರಾಜ್ಯದಲ್ಲಿ ಚುನಾವಣೆಯನ್ನು ಮುಂದೂಡಲು ಯುಪಿಎ ಕ್ಷೇತ್ರ ಮರುವಿಂಗಡಣೆಯನ್ನು ಅಸ್ತ್ರವಾಗಿಸಿಕೊಳ್ಳುತ್ತದೆ ಎಂದು ಬಿಜೆಪಿ ಈಗಾಗಲೇ ದೂರುತ್ತಿದೆ.
ನವೆಂಬರ್ ತಿಂಗಳಲ್ಲಿ ನಡೆದ ರಾಜಕೀಯ ವಿದ್ಯಮಾನಗಳಿಂದಾಗಿ ಒಂದೇ ವಾರದಲ್ಲಿ ಯಡಿಯೂರಪ್ಪ ಸರಕಾರ ಅಧಿಕಾರ ಕಳೆದುಕೊಂಡ ಕಾರಣ ಬಿಜೆಪಿಯು ಗಳಿಸಿರುವ ಅನುಕಂಪವನ್ನು ಮರೆಸಲು, ರಾಜ್ಯ ಕಾಂಗ್ರೆಸ್‌ನ ಹುನ್ನಾರವಿದು ಎಂಬುದು ಬಿಜೆಪಿ ಆಪಾದನೆ.
ಇದೀಗ ಕ್ಷೇತ್ರ ಮರುವಿಂಗಡಣೆಯ ಘೋಷಣೆಯಿಂದಾಗಿ ರಾಜ್ಯದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಒಳಗೆ ಚುನಾವಣೆ ನಡೆಯಲಾರದು ಎಂಬುದು ಸ್ಪಷ್ಟವಾಗಿದೆ. ಕರ್ನಾಟಕವಲ್ಲದೆ, ಮೇಘಾಲಯ, ತ್ರಿಪುರ, ಮಿಜೋರಾಮ್, ಚತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ದೆಹಲಿಗಳೂ ಮುಂಬರುವ ನವೆಂಬರ್‌ನಲ್ಲಿ ಚುನಾವಣೆ ಎದುರಿಸಲಿವೆ.
ಕ್ಷೇತ್ರ ಮರುವಿಂಗಡಣಾ ಆಯೋಗದ ವರದಿಯಾಧಾರದಲ್ಲಿ ಜಾರ್ಖಂಡ್, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್‌ಗಳನ್ನು ಮರುವಿಂಗಡಣೆಯಿಂದ ಹೊರಪಡಿಸಲಾಗಿದೆ. ಕ್ಷೇತ್ರ ಮರುವಿಂಗಡಣಾ ಆಯೋಗವನ್ನು 2002ರಲ್ಲಿ ರೂಪಿಸಲಾಗಿದ್ದು, ಅದು 2007ರ ಚಳಿಗಾಲದ ಅಧಿವೇಶನದಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು.
|