ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಣಯವನ್ನು ಕಟುವಾಗಿ ಟೀಕಿಸಿರುವ ಆಡಳಿತಾರೂಢ ಯುಪಿಎ ಅಂಗವಾದ ಎಡಪಕ್ಷಗಳು, ತಕ್ಷಣವೇ ಬೆಲೆ ಏರಿಕೆ ಹಿಂತೆಗೆದುಕೊಳ್ಳದಿದ್ದರೆ, ರಾಷ್ಟ್ರಾದ್ಯಂತ ಪ್ರತಿಭಟನೆಗಳನ್ನು ನಡೆಸುವುದಾಗಿ ಹೇಳಿದೆ.
ಅದೇ ರೀತಿ, ಪ್ರತಿಪಕ್ಷವಾಗಿರುವ ಬಿಜೆಪಿ ಕೂಡ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಿಂದ ಹಣದುಬ್ಬರ ಮತ್ತಷ್ಟು ಹೆಚ್ಚಲಿದ್ದು, ಜನಸಾಮಾನ್ಯ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾನೆ ಎಂದು ಹೇಳಿದೆ.
ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಬೆಲೆ ಏರಿಕೆ ಅಗತ್ಯವಿರಲಿಲ್ಲ, ಅದನ್ನು ಹಿಂತೆಗೆದುಕೊಳ್ಳಲೇಬೇಕು ಎಂದು ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯ ಸೀತಾರಾಮ ಯೆಚೂರಿ ಹೇಳಿದ್ದಾರೆ.
ಪೆಟ್ರೋಲ್ ಬೆಲೆಯನ್ನು 12-16 ರೂ., ಡೀಸೆಲ್ ಬೆಲೆಯನ್ನು 12 ರೂ., ಸೀಮೆಎಣ್ಣೆ ಬೆಲೆಯನ್ನು 5 ರೂ. ಹಾಗೂ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 150 ರೂ.ನಷ್ಟು ಏರಿಸಲು ಸರಕಾರವು ಯೋಜಿಸಿತ್ತು ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
ಇತ್ತ, ಕಾಂಗ್ರೆಸ್‌ನ 'ಆಮ್ ಆದ್ಮೀ' ಘೋಷಣೆಯು ಧೂಳೀಪಟವಾಗಿದೆ ಎಂದು ಟೀಕಿಸಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಈ ಬೆಲೆ ಏರಿಕೆಯಿಂದಾಗಿ ಅವಶ್ಯ ವಸ್ತುಗಳೂ ಗಗನಮುಖಿಯಾಗುತ್ತವೆ. ಸಮಾಜದ ಎಲ್ಲ ವರ್ಗದವರ, ವಿಶೇಷವಾಗಿ ರೈತರು ಹಾಗೂ ಮಧ್ಯಮ ವರ್ಗದವರ ಮೇಲೆ ಇದು ಗಾಢ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ, ಜನಸಾಮಾನ್ಯನ ಮೇಲೆ ಹೊರೆ ಹೊರಿಸಿದೆ ಎಂದ ಅವರು, ನಾಳೆಯಿಂದಲೇ ಈ ಕುರಿತು ದೇಶಾದ್ಯಂತ ಪ್ರತಿಭಟನೆ ಆರಂಭಿಸುವುದಾಗಿ ಹೇಳಿದರು.
ಪೆಟ್ರೋ ಉತ್ಪನ್ನಗಳ ಮೇಲಿನ ಆಮದು ಸುಂಕ ವ್ಯವಸ್ಥೆಯನ್ನು ಪರಿಷ್ಕರಿಸಿದ್ದರೆ ಕೇಂದ್ರವು ಈ ಬೆಲೆ ಏರಿಕೆಯನ್ನು ತಡೆಯಬಹುದಿತ್ತು ಎಂದು ಯೆಚೂರಿ ನುಡಿದರು.
ಯುಪಿಎ ಅಧಿಕಾರಕ್ಕೆ ಬಂದ ಬಳಿಕ ಎರಡು ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಏರಿಸಲಾಗಿತ್ತಾದರೂ, ಎಡಪಕ್ಷಗಳ ಒತ್ತಡದಿಂದ ಬೆಲೆ ಏರಿಕೆ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕಾಗಿತ್ತು.
|