ಸಾಹಿತಿ, ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಹಾಗೂ ಸಾಹಿತಿ ಸಾರಾ ಅಬೂಬಕರ್ ಹಾಗೂ ಇತರರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಲಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ| ಎಂ. ಕಾವೇರಿಯಪ್ಪ ಪ್ರಕಟಿಸಿದ್ದಾರೆ.
ಸಮಾಜಸೇವಕ ಜಿ.ಶಂಕರ್, ಶಿಕ್ಷಣ ತಜ್ಞ ಡಾ| ಪಿ.ಸೆಲ್ವಿದಾಸ್ ಹಾಗೂ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆಯವರನ್ನೂ ಸಹ ಈ ಬಾರಿಯ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ 26 ನೇ ಘಟಿಕೋತ್ಸವ ಶನಿವಾರ ಸಂಜೆ ಮಂಗಳ ಗಂಗೋತ್ರಿಯ ವಿಜ್ಞಾನ ಸಂಕೀರ್ಣದಲ್ಲಿ ಜರುಗಲಿದ್ದು ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಕೇವಲ ಆಡಳಿತ ಕ್ಷೇತ್ರವಷ್ಟೇ ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿಯೂ ವೀರಪ್ಪ ಮೊಯ್ಲಿಯವರು ಗಣನೀಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಅವರಿಗೆ ಈ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಅವರ ಸುಳಿಗಾಳಿ ಕಾದಂಬರಿಯನ್ನಾಧರಿಸಿ ಪ್ರೇಮವೇ ಬಾಳಿನ ಬೆಳಕು ಎಂಬ ಚಲನಚಿತ್ರ ನಿರ್ಮಾಣವಾಗಿದೆ. ಸಾಗರದೀಪ ಕಾದಂಬರಿಯೂ ನಾಗಾಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ. ಅವರು ರಚಿಸಿದ ಇನ್ನೊಂದು ಕಾದಂಬರಿ ಕೊಟ್ಟ. ಅವರ ಮಹತ್ವಾಕಾಂಕ್ಷೆಯ ಇನ್ನೊಂದು ಕೃತಿ ಶ್ರೀ ರಾಮಾಯಣ ಮಹಾನ್ವೇಷಣಂ.
|