ಸಾಕ್ಷರತೆಯಲ್ಲಿ ಭಾರತವು ಇತರ ಔದ್ಯಮಿಕ ರಾಷ್ಟ್ರಗಳಿಗಿಂತ ಹಿಂದಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ ಸಿಂಗ್, ಪ್ರತಿಮಗುವಿಗೂ ಶಿಕ್ಷಣ ಒದಗುವಂತಾಗಲು ಸರಕಾರವು ಶಾಸನವೊಂದನ್ನು ರೂಪಿಸಲಿದೆ ಎಂದು ಹೇಳಿದ್ದಾರೆ.
"ಪ್ರತಿಮಗುವಿಗೂ ಶಿಕ್ಷಣದ ಹಕ್ಕನ್ನು ಒದಗಿಸಲು ನಾವು ಸದ್ಯವೇ ಮಸೂದೆಯೊಂದನ್ನು ಮಂಡಿಸಲಿದ್ದೇವೆ. ಸುದೀರ್ಘ ಅವಧಿಯಲ್ಲಿ ಕ್ಷಿಪ್ರ ಅಭಿವೃದ್ಧಿಗೆ ಇದೊಂದು ಖಚಿತ ಮಾರ್ಗವಾಗಿದೆ" ಎಂದು ಪ್ರಧಾನಿ ಮನಮೋಹನ್ ಸಿಂಗ್ ಎಫ್ಐಸಿಸಿಐನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಾ ನುಡಿದರು.
ಇದಲ್ಲದೆ, ಸರಕಾರವು ವೃತ್ತಿಪರ ಶಿಕ್ಷಣಕ್ಕಾಗಿ ಒಂದು ರಾಷ್ಟ್ರೀಯ ನಿಯೋಗವೊಂನ್ನು ಆರಂಭಿಸಲಿದೆ, ಈ ಕುರಿತು ಕಾರ್ಯಗಳು ಪ್ರಗತಿಯಲ್ಲಿದೆ ಎಂದೂ ಪ್ರಧಾನಿ ಸಿಂಗ್ ನುಡಿದರು.
ಯುಪಿಎ ಸರಕಾರವು ತನ್ನ ಸಾರ್ವಜನಿಕ ನೀತಿಯಲ್ಲಿ ಶಿಕ್ಷಣವನ್ನು ಪ್ರಾಧಾನ್ಯ ವಲಯವಾಗಿಸಿದೆ ಎಂದು ಬೆಟ್ಟು ಮಾಡಿದ ಅವರು, "ಯಾವುದೇ ಆಧುನಿಕ ಔದ್ಯಮಿಕ ಆರ್ಥಿಕತೆಯು ಶೇ.80ಕ್ಕಿಂತ ಕಡಿಮೆ ಸಾಕ್ಷರತೆಯನ್ನು ಹೊಂದಿಲ್ಲ. ಆದರೆ ನಾವು ಇನ್ನೂ ಶೇ.70ಕ್ಕಿಂತಲೂ ಹಿಂದಿದ್ದೇವೆ" ಎಂದು ಖೇದ ವ್ಯಕ್ತಪಡಿಸಿದರು.
ಸರಕಾರವು 30 ಹೊಸ ವಿಶ್ವವಿದ್ಯಾನಿಲಯಗಳು, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ 370 ಕಾಲೇಜುಗಳು ಮತ್ತು ಪ್ರತೀ ಕ್ಷೇತ್ರಗಳಲ್ಲಿಯೂ 6,000 ಉನ್ನತ ಮಟ್ಟದ ಶಾಲೆಗಳನ್ನು ತೆರೆಯವ ಕುರಿತೂ ಸರಕಾರ ಯೋಚಿಸುತ್ತಿದೆ ಎಂದು ಅವರು ನುಡಿದರು.
ಇದಲ್ಲದೆ, ಸರಕಾರವು 8 ಹೊಸ ಐಐಟಿಗಳು, 20 ಭಾರತೀಯ ಮಾಹಿತಿ ಹಾಗೂ ತಂತ್ರಜ್ಞಾನ ಸಂಸ್ಥೆ, 7 ಐಐಎಂಗಳು ಮತ್ತು 5 ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲಿದೆ ಎಂದು ತಿಳಿಸಿದರು.
|