ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಲವು ರಾಜಕೀಯ ನಾಯಕರಿಂದ ವಾಗ್ಧಾಳಿಗೀಡಾಗಿರುವ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ತನ್ನ ಮೇಲಿನ ಆಪಾದನೆಯನ್ನು ಅಲ್ಲಗಳೆದಿದ್ದು, ತಾನು ಕನ್ನಡಿಗರನ್ನು ಅವಮಾನಿಸಿಲ್ಲ, ಇದು ರಾಜಕೀಯ ಲಾಭಕ್ಕಾಗಿ ಮಾಡಿರುವ ಅಪಪ್ರಚಾರ ಎಂದು ತಿಪ್ಪೆ ಸಾರಿಸಿದ್ದಾರೆ.
ಕನ್ನಡಿಗರ ಮೇಲೆ ಅಪಾರ ಗೌರವವಿರುವುದಾಗಿ ನುಡಿದ ಅವರು ಕರ್ನಾಟಕ ಜನತೆಯ ಭಾವನೆಗಳಿಗೆ ನೋವುಂಟು ಮಾಡುವಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಅಲ್ಲದೆ ಕನ್ನಡಿಗರ ಮೇಲೆ ಗೌರವ ಇರುವುದರಿಂದಲೇ ದೇವೇಗೌಡರು ಪ್ರಧಾನಿಯಾಗಲು ಬೆಂಬಲ ನೀಡಿರುವುದಾಗಿ ಲಾಲೂ ಸುದ್ದಿಸಂಸ್ಥೆಯೊಂದರೊಂದಿಗೆ ಮಾತನಾಡುತ್ತಾ ನುಡಿದರು.
ರೈಲ್ವೇ ನೇಮಕಾತಿಯ ಕುರಿತಂತೆ ತನ್ನ ಹೇಳಿಕೆಯನ್ನು ಮಾಧ್ಯಮದ ಒಂದು ವರ್ಗವು ತಿರುಚಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಪ್ರತಿಭಟನಾಕಾರರನ್ನು 'ಡರ್ಟಿ ಪೀಪಲ್' ಎಂದರೆಂದು ಪ್ರಕಟವಾಗಿರುವುದು ರಾಜ್ಯದಲ್ಲಿ ತೀವ್ರ ಪ್ರತಿಭಟನೆಯನ್ನು ಕಂಡಿದೆ.
|