ಹೆಸರಿನಲ್ಲೇನಿದೆ ಅಂತ ಕೇಳಿ ಕೇಳಿ ಸುಸ್ತಾಗಿದೆ. ಹಾಗಿದ್ದರೆ ಈಗ ಮತ್ತೊಮ್ಮೆ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಮೇಘಾಲಯದಲ್ಲಿ ಮಾರ್ಚ್ 3ರಂದು ಓಟು ಹಾಕಲಿರುವ ಮತದಾರರು. ಅಡಾಲ್ಫ್ ಹಿಟ್ಲರ್, ಅಡ್ಮಿರಲ್, ಫ್ರಾಂಕಿನ್‌ಸ್ಟೈನ್, ರೋಮಿಯೋದಿಂದ ಹಿಡಿದು ನ್ಯೂಟನ್‌ವರೆಗಿನ ಹೆಸರುಗಳನ್ನು ಈ ಮತ ಮಹಾ ಸಮರದಲ್ಲಿ ಕೇಳಬಹುದು!
ಇಲ್ಲಿ ಒಂದು ರೀತಿಯಲ್ಲಿ ಡಲ್ ಆಗಿದ್ದ ಚುನಾವಣಾ ಪ್ರಚಾರವನ್ನು ರಂಜನೀಯವಾಗಿಸಿರುವುದು ಈ ಹೆಸರುಗಳೇ.
ಹಿಟ್ಲರ್ ಅಂದರೆ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮರಳಿ ಬಂದಿದ್ದಾನೆ ಅಂತ ತಲೆಕೆಡಿಸಿಕೊಳ್ಳಬೇಕಿಲ್ಲ. ಎನ್‌ಸಿಪಿಯ ಅಡಾಲ್ಫ್ ಹಿಟ್ಲರ್ ಆರ್ ಮಾರಾಕ್ ಎಂಬವರು ಇಲ್ಲಿನ ರಂಗ್ಸಕೋನಾ ಕ್ಷೇತ್ರದಲ್ಲಿ ಹಾಲಿ ಸಚಿವ ಜೆನಿತ್ ಸಂಗ್ಮಾ ಅವರಿಗೆ ಸೆಡ್ಡು ಹೊಡೆದು ಚುನಾವಣಾ ಕಣದಲ್ಲಿ ಇಳಿದಿದ್ದಾರೆ.
ಮತ್ತೊಬ್ಬ ಎನ್‌ಸಿಪಿ ಅಭ್ಯರ್ಥಿ ಮತ್ತು ಹಾಲಿ ಶಾಸಕರ ಹೆಸರು ಅಡ್ಮಿರಲ್ ಸಂಗ್ಮಾ. ಅವರು ತಮ್ಮ ಪಕ್ಷದ ನೌಕೆಯನ್ನು ದಲಮ್‌ಗಿರಿ ಕ್ಷೇತ್ರದಲ್ಲಿ ಮುನ್ನಡೆಸುವ ಕಾಯಕದಲ್ಲಿದ್ದಾರೆ.
ರಾಂಗ್ರೆಂಗ್ರಿ ಕ್ಷೇತ್ರದಲ್ಲಿ ಕಣಕ್ಕಿಳಿದಿರುವುದು ನ್ಯೂಟನ್, ಅಂದರೆ ಬೇರಾರೂ ಅಲ್ಲ, ಅದು ಯುಡಿಪಿ ಅಭ್ಯರ್ಥಿ ನ್ಯೂಟನ್ ಮಾರಾಕ್. ತಮ್ಮ ಹೆಸರಿನಿಂದಲೇ ಅವರು ಮತದಾರರನ್ನು ಸೆಳೆಯತೊಡಗಿದ್ದಾರೆ.
ಕಣದಲ್ಲಿರುವ ಮತ್ತೊಂದು ಹೆಸರು ಮಾಡುತ್ತಿರುವ ಹೆಸರೆಂದರೆ ಕಾಂಗ್ರೆಸಿನ ಫ್ರಾಂಕಿನ್‌ಸ್ಟೈನ್ ಮೊಮಿನ್. ಅವರು ಮೆಂಡಿಪತ್ತರ್ ಕ್ಷೇತ್ರದಲ್ಲಿ ಯುಡಿಪಿ ಶಾಸಕ ಬಿ.ಜಿ.ಮೊಮಿನ್‌ಗೆ ಸವಾಲೊಡ್ಡಿದ್ದಾರೆ.
ಯುವ ಮತದಾರರನ್ನು ಸೆಳೆಯಲೋ ಎಂಬಂತೆ ಬಿಜೆಪಿಯೂ ಹಿಂದುಳಿದಿಲ್ಲ. ಅದು 'ರೋಮಿಯೋ'ನನ್ನೇ ಕಣಕ್ಕಿಳಿಸಿದೆ. ಲಾಯಿತುಂಕ್ರಾ ಕ್ಷೇತ್ರದಲ್ಲಿ ರೋಮಿಯೋ ಫೀರಾ ರಾಣಿ ಅವರು ಸ್ಪರ್ಧಿಸುತ್ತಿದ್ದಾರೆ.
|