ಮುಂಬರುವ ಕೆಲವೇ ದಶಕಗಳಲ್ಲಿ ಜಾಗತಿಕವಾಗಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ ಎಂದು ಭವಿಷ್ಯ ನುಡಿದಿರುವ ಅರ್ಥಶಾಸ್ತ್ರಜ್ಞ ಹಾಗು ಬರಹಗಾರ ಎರಿಕ್ ಆರ್ಸ್ನೆನ್ನ, ಕುಡಿಯುವ ನೀರಿನ ಪರಿಣಾಮಕಾರಿ ವಿತರಣೆಗಾಗಿ ನೀರು ಮೂಲಗಳನ್ನು ಸಂರಕ್ಷಿಸಲು ದೀರ್ಘಕಾಲೀನ ಯೋಜನೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಭಾರತೀಯ ಚೇಂಬರ್ ಆಫ್ ಕಾಮರ್ಸಿನಲ್ಲಿ ನೀರು ಸರಬರಾಜು ಮತ್ತು ಸಂಬಂಧಿತ ಸನ್ನಿವೇಶಗಳ ಕುರಿತು ಉಪನ್ಯಾಸ ನೀಡುತ್ತಿದ್ದ ಅವರು ನೀರಿನ ಕೊರತೆಯೊಂದು ಜಾಗತಿಕ ಸಮಸ್ಯೆ ಎಂದು ಹೇಳಿದರಲ್ಲದೆ, ಇದು ಗಡಿ ರಾಷ್ಟ್ರಗಳಲ್ಲಿ ಪ್ರಾಂತೀಯ ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ ಎಂದು ನುಡಿದರು.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಗಳ ನಡುವಿನ ಶಾಂತಿ ಮಾತುಕತೆಗಳಿಗೆ ನೀರು ಅತಿದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಬೆಟ್ಟುಮಾಡಿದ್ದಾರೆ. ಚೀನವು ತಾನು ಎದುರಿಸುತ್ತಿರುವ ನೀರಿನ ಕೊರತೆಯನ್ನು ಇಂಗಿಸಲು, ತನ್ನ ಪ್ರಾಂತ್ಯದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟುಕಟ್ಟಲು ಮುಂದಾಗಿದೆ. ಇದು ನೆರೆಯ ದೇಶಗಳಾದ ಭಾರತ ಮತ್ತು ಬಂಗ್ಲಾಗಳ ಮೇಲೆ ವಿರುದ್ಧ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ನೀರಿನ ಬಳಕೆಯ ಮೇಲೆ ತೆರಿಗೆ ವಿಧಿಸಬೇಕು ಎಂದು ಸಲಹೆ ನೀಡಿದ ಅವರು, ಈ ಹಣವನ್ನು ಸುರಕ್ಷಿತ ಕುಡಿಯುವ ನೀರಿನ ವಿತರಣೆಗೆ ಬಳಸಬಹುದು ಎಂದು ನುಡಿದರು.
|