ಬಿಹಾರಿಗಳೆಂದರೆ, ನೀತಿ-ನಿಯಮ, ಕಾನೂನುಗಳನ್ನೆಲ್ಲ ಗಾಳಿಗೆ ತೂರಿ, ಆನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುವ ಲಾಲೂ ಪ್ರಸಾದ್ ಯಾದವ್ ಅವರಿಗೆ 'ಪೂಜೆ' ಮಾಡಿರುವ ಶಿವಸೇನಾ ವರಿಷ್ಠ ಬಾಳಠಾಕ್ರೆ, "ತಮಿಳ್ನಾಡಿನಾದ್ಯಂತ ಶಾಲೆಗಳಲ್ಲಿ ತಮಿಳು ಕಡ್ಡಾಯ ಮಾಡಿರುವುದನ್ನು ವಿರೋಧಿಸಲು ಚೆನ್ನೈಯ ಮರೀನಾ ಬೀಚಿನಲ್ಲಿ ಲಾಲೂ 'ಚಾತ್ ಪೂಜೆ' ಮಾಡಲಿ" ಎಂದು ಸವಾಲು ಹಾಕಿದ್ದಾರೆ.
"ಬಿಹಾರವನ್ನು ನರಕವಾಗಿರಸಿರುವ ಲಾಲೂ ಪ್ರಸಾದ್ ಯಾದವ್, ಕೇಂದ್ರದ ಯುಪಿಎಯ ಮಿತ್ರ ಪಕ್ಷವಾಗಿರುವ ಡಿಎಂಕೆ ಆಡಳಿತವಿರುವ ತಮಿಳ್ನಾಡಿನಲ್ಲಿ ಉತ್ತರ ಭಾರತೀಯರ ಉನ್ನತಿಗಾಗಿ ಬಿಹಾರಿಗಳ ಮೇಳ ನಡೆಸಲಿ" ಎಂಬುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನಾದ ರಾಜ್ ಠಾಕ್ರೆಯವರ ಉತ್ತರ ಭಾರತೀಯರ ವಿರೋಧಿ ಚಳುವಳಿಗೆ ಪ್ರತಿಯಾಗಿ ಮುಂಬಯಿಗೆ ಬಂದು 'ಚಾತ್ ಪೂಜೆ' ನೆರವೇರಿಸುವುದಾಗಿ ಲಾಲೂ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಠಾಕ್ರೆಯ ಈ ಹೇಳಿಕೆ ಹೊರಬಿದ್ದಿದೆ. ತಮಿಳ್ನಾಡಿನಲ್ಲಿ ಕರುಣಾನಿಧಿ ಸರಕಾರ ತಮಿಳು ಕಡ್ಡಾಯ ಮಾಡಿ ಸುಗ್ರೀವಾಜ್ಞೆ ಹೊರಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಠಾಕ್ರೆಯ ಈ ಹೇಳಿಕೆ ಶಿವ ಸೇನಾದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿದೆ.
ಕೆಲವು ಸ್ಥಳೀಯ ಉತ್ತರ ಭಾರತೀಯ ಕಾಂಗ್ರೆಸ್ ನಾಯಕರು ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್‌ನಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿಸಬೇಕು ಎಂಬ ಒತ್ತಾಯ ಮಾಡಿದ್ದಾರೆನ್ನುವ ಹಿನ್ನೆಲೆಯಲ್ಲಿಯೂ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಠಾಕ್ರೆ, "ಅವರಿದನ್ನು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ ಮತ್ತು ಗೌಹಾಟಿಯಲ್ಲಿ ಮೊದಲಿಗೆ ಪ್ರಯತ್ನಿಸಲಿ" ಎಂದು ಹೇಳಿದ್ದಾರೆ.
ಈ ಮಣ್ಣಿನ ಮಕ್ಕಳು ಮರಾಠಿ ಮತ್ತು ಮುಂಬೈಯ ಸ್ಥಾನಮಾನಕ್ಕೆ ಯಾವುದೇ ಅವಮಾನವನ್ನು ಸಹಿಸರು ಎಂದು ಸಾಮ್ನಾದ ಸಂಪಾದಕೀಯ ಹೇಳಿದೆ.
ಮುಂಬಯಿ ಪಾಲಿಕೆಯಲ್ಲಿ ಹಿಂದಿಯನ್ನು ಹೇರಬೇಕು ಎಂದು ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮಹಾರಾಷ್ಟ್ರ ಸರಕಾರ ಕಾನೂನು ಕ್ರಮ ಜರುಗಿಸಿ ಕಂಬಿಗಳ ಹಿಂದೆ ತಳ್ಳಬೇಕು ಎಂದು ಠಾಕ್ರೆ ಹೇಳಿದ್ದಾರೆ.
ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್, ಮುಂಬೈಯ ಬಾಗಿಲು ಎಲ್ಲರಿಗೂ ತೆರೆದಿದೆ. "ಭೂಮಿಪುತ್ರರ ವೆಚ್ಚದಲ್ಲಿ ಮುಂಬೈಯನ್ನು ಆರ್ಥಿಕವಾಗಿ ಮತ್ತು ಅಪರಾಧಿಕವಾಗಿ ಶೋಷಿಸಲಾಗಿದೆ. ಆದರೆ ಇಲ್ಲಿನ ಮಕ್ಕಳು ಮಾತ್ರ ಅವಕಾಶ ವಂಚಿತರಾಗಿದ್ದಾರೆ" ಎಂದು ಹೇಳಿದ್ದಾರೆ.
|