ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಕ್ಕಾಗಿ ಕ್ರಿಕೆಟಿಗರನ್ನು ಹರಾಜು ಹಾಕಿರುವ ಕ್ರಮವು, ಸಂಪತ್ತಿನ ಕೀಳುಮಟ್ಟದ ಪ್ರದರ್ಶನ ಎಂದು ಜರೆದಿರುವ ಜೆಡಿ(ಯು), ಈ ಎಲ್ಲ ಹಣವನ್ನು ಹಿಂಪಡೆದು, ಇದನ್ನು ಇತರ ಕ್ರೀಡೆಗಳ ಉತ್ತೇಜನಕ್ಕೆ ಮರುಬಳಸಬೇಕು ಎಂದು ಒತ್ತಾಯಿಸಿದೆ.
"ಕ್ರಿಕೆಟಿಗರನ್ನು ಹರಾಜು ಹಾಕಿದ ದಿನವು ರಾಷ್ಟ್ರೀಯ ಅವಮಾನಕರ ದಿವಸ. ಇದು ಸಂಪತ್ತಿನ ಅಸಭ್ಯ ಪ್ರದರ್ಶನ ಹಾಗೂ ಹಣದ ಶಕ್ತಿಯ ನಾಚಿಕೆಗೇಡಿನ ಪ್ರಾತ್ಯಕ್ಷಿಕೆ" ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಇಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಸರಕಾರದ ಕ್ರೀಡಾ ನೀತಿಯನ್ನು ಟೀಕಿಸಿದ ಅವರು, ಇತರ ಆಟೋಟಗಳ ವೆಚ್ಚದಲ್ಲಿ ಕ್ರಿಕೆಟ್ ಮತ್ತು ಕ್ರಿಕೆಟಿಗರನ್ನು ಉತ್ತೇಜಿಸಲಾಗಿದೆ ಎಂದು ನುಡಿದರಲ್ಲದೆ, ಇದರಿಂದಾಗಿ ಒಲಂಪಿಕ್ಸ್ ಸೇರಿದಂತೆ ಇತರ ಎಲ್ಲಾ ಜಾಗತಿಕ ಕ್ರೀಡೆಗಳ ಪದಕ ಪಟ್ಟಿಯಲ್ಲಿ ಭಾರತವು ಕೆಳಸಾಲಿನಲ್ಲಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ತಮ್ಮನ್ನು ಹರಾಜಿ ಒಡ್ಡಿಕೊಂಡಿರುವ ಎಲ್ಲ ಕ್ರಿಕೆಟಿಗರಿಗೆ ನೀಡಿರುವ ಪದಕ-ಪ್ರಶಸ್ತಿಗಳು, ಬಿರುದು-ಬಾವಲಿಗಳು ಮತ್ತು ಉಚಿತ ಸೇವೆಯನ್ನು ವಾಪಾಸು ಪಡೆಯಬೇಕು ಎಂದು ಶರದ್ ಯಾದವ್ ಒತ್ತಾಯಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಿಕೆಟಿಗರಿಗೆ ಕೋಟಿಗಟ್ಟಲೆ ರೂಪಾಯಿ ಹಣಕಾಸು ನೆರವು ನೀಡಿದ್ದು, ಇವುಗಳನ್ನು ಮರಳಿ ಪಡೆದು ಇತರ ಕ್ರೀಡೆಗಳನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದ್ದಾರೆ.
ಬಿಸಿಸಿಐಯನ್ನು ಹಣನೇಯುವ ಸಂಘಟನೆ ಎಂದಿರುವ ಅವರು ಇದು ಪಿತೂರಿ ಹಾಗೂ ಸಂಚು ನಡೆಸುವ ಕಾರಸ್ಥಾನವಾಗಿದೆ ಎಂದು ಖಾರವಾಗಿ ನುಡಿದಿದ್ದು, ಸರಕಾರ ಈ ಕ್ರೀಡಾಮಂಡಳಿಯನ್ನು ತನ್ನ ವಶಕ್ಕೆ ಪಡೆದುಕೊಂಡು ಇದನ್ನು ಕ್ರೀಡಾ ಸಚಿವಾಲಯಕ್ಕೆ ಒಪ್ಪಿಸಬೇಕು ಎಂದು ಹೇಳಿದರು.
ಕ್ರಿಕೆಟನ್ನು ಒಂದು ಕ್ರೀಡೆಯಾಗಿ ಉತ್ತೇಜಿಸಬೇಕೆ ವಿನಹ ಒಂದು ಮಾರುಕಟ್ಟೆ ಶಕ್ತಿಯಾಗಿ ಉತ್ತೇಜಿಸಬಾರದು ಎಂದೂ ಅವರು ಹೇಳಿದ್ದಾರೆ.
|