ತ್ರಿಪುರಾದಲ್ಲಿ ಶನಿವಾರ ವಿಧಾನ ಸಭಾ ಚುನಾವಣೆ ನಡೆಯುತ್ತಿದ್ದು, ರಾಜ್ಯ ಚುನಾವಣೆಗೆ ಸಜ್ಜಾಗಿದೆ. ಆದರೆ ರಾಜ್ಯವು ಹಿಂಸಾಚಾರದ ಭೀತಿಯ ಭ್ರಾಂತಿಯಲ್ಲಿದೆ.
ತ್ರಿಪುರಾದ 60 ಸ್ಥಾನ ಬಲದ ವಿಧಾನಸಭೆಗೆ ನಡೆಯುವ ಚುನಾವಣೆಗಾಗಿ ಚುನಾವಣಾ ಆಯೋಗವು ಕೈಗೊಂಡಿರುವ ಕ್ರಮಗಳ ಬಗ್ಗೆ ಆಡಳಿತಾರೂಢ ಸಿಪಿಐ(ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ತೃಪ್ತಿ ವ್ಯಕ್ತಪಡಿಸಿವೆ. ಆದರೆ, ವಿವಿಧ ಪಕ್ಷಗಳು ಚುನಾವಣಾ ಮುಂಚಿತವಾಗಿ ಬೆದರಿಕೆ ಹಾಗೂ ಭಯೋತ್ಪಾದನೆಯ ಆರೋಪಗಳನ್ನು ಮಾಡಿವೆ.
ಪಶ್ಚಿಮ ತ್ರಿಪುರಾದ ರಾಮಚಂದ್ರಘಾಟ್ ಕ್ಷೇತ್ರ ವ್ಯಾಪ್ತಿಯ ಅಂಪುರದಲ್ಲಿ ನಡೆದ ಹಿಂಸಾಚಾರ ಬಿಟ್ಟರೆ, ಮಿಕ್ಕಂತೆ ಯಾವುದೆ ದೊಡ್ಡ ಪ್ರಮಾಣದ ಚುನಾವಣಾ ಹಿಂಸಾಚಾರ ಸಂಭವಿಸಿಲ್ಲ. ಅಂಪುರದಲ್ಲಿ ಐಎನ್‌ಪಿಟಿ ಕಾರ್ಯಕರ್ತರು ಗುರುವಾರ ರಾತ್ರಿ ಎಡರಂಗದ ಬೆಂಬಲಿಗರ ಮೇಲೆ ದಾಳಿ ನಡೆಸಿದ ವೇಳೆ 45 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ನೇಪಾಳ್ ದಾಸ್ ಹೇಳಿದ್ದಾರೆ.
ಒಟ್ಟಾರೆ 43 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಇವುಗಳಲ್ಲಿ ಐದು ಸಾವಿರ ಕೇಂದ್ರ ಅರೆ ಸೇನಾಪಡೆಗಳು ಸೇರಿವೆ. ಒಟ್ಟು 2391 ಮತಗಟ್ಟೆಗಳಿದ್ದು, 28 ಮಹಿಳೆಯರು ಮತ್ತು 64 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 313 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಒಟ್ಟು 20,36,980 ಮತದಾರರು ಮತದಾನದ ಹಕ್ಕನ್ನು ಹೊಂದಿದ್ದು, ಇವರಲ್ಲಿ 9,96,582 ಮಂದಿ ಮಹಿಳೆಯರು.
|