ಅಸ್ಸಾಂನಲ್ಲಿ ಶುಕ್ರವಾರ ಜರುಗಿದ ಮಾಜಿ ಉಗ್ರಗಾಮಿ ಮತ್ತು ಹಾಲಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಮುಖ್ಯಸ್ಥ ಹಗ್ರಾಮಾ ಮೊಹಿಲರಿ ಮದುವೆಯು ಈ ಪ್ರದೇಶದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯ ವಿವಾಹವೆಂದು ಸಾಬೀತಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮೂರು ವಿಭಿನ್ನ ವೇದಿಕೆಗಳು, 800 ಮಂದಿ ಸ್ವಯಂ ಸೇವಕರು, 50 ಸಾವಿರ ಅತಿಥಿಗಳು, ಡಜನುಗಟ್ಟಲೆ ಸ್ವಾಗತ ಕಮಾನುಗಳು ಮತ್ತು ಮೂರು ಜಿಲ್ಲಾ ಆಡಳಿತಗಳು ತಮ್ಮೆಲ್ಲಾ ಸಂಪನ್ಮೂಲಗಳನ್ನು ಈ ವಿವಾಹ 'ಉತ್ಸವ'ಕ್ಕೆ ಬಳಸುತ್ತಿದೆ. ಇದು ಈಶಾನ್ಯ ಭಾರತದ ಅತ್ಯಂತ ಅದ್ದೂರಿಯ ವಿವಾಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವರ ಹಗ್ರಾಮಾ ಮೊಹಿಲರಿ, ಒಂದು ಕಾಲದಲ್ಲಿ ಬೋಡೋ ಲಿಬರೇಷನ್ ಟೈಗರ್ (ಬಿಎಲ್‌ಟಿ) ಎಂಬ ಉಗ್ರಗಾಮಿ ಸಂಘಟನೆ ಮುಖ್ಯಸ್ಥನಾಗಿದ್ದು, 15 ವರ್ಷಗಳ ಕಾಲ ಆ ಪ್ರದೇಶದಲ್ಲಿ ಹತ್ಯೆ, ಬಾಂಬ್ ಸ್ಫೋಟ ಮತ್ತು ಅಪಹರಣವೇ ಮೊದಲಾದ ಕುಕೃತ್ಯಗಳಿಂದ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ.
ಬೋಡೋ ಒಪ್ಪಂದದ ಬಳಿಕ, ಆತ ಬಿಟಿಸಿ ಮುಖ್ಯಸ್ಥನಾಗಿ ನೇಮಕಗೊಂಡಿದ್ದು, ಆತನ ಬಿಪಿಪಿಎಫ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸ್ಥಿರ ಸಮ್ಮಿಶ್ರ ಸರಕಾರ ರಚಿಸಲು ನೆರವಾಗಿತ್ತು.
ಈ ಔದಾರ್ಯಕ್ಕೆ ಧನ್ಯವಾದ ಸಲ್ಲಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ತರುಣ್ ಗೊಗೊಯ್ ತಮ್ಮ ಆರೋಗ್ಯ ಸಚಿವ ಹಿಮಂತ ಬಿಸ್ವಾಸ್ ಶರ್ಮಾ ಜತೆಗೂಡಿ ನಾಳೆ ನಡೆಯುವ ಆರತಕ್ಷತೆಗೆ ಹಾಜರಾಗಲಿದ್ದಾರೆ.
ಆತ ನಮ್ಮ ಸರಕಾರದ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದು, ನಾನು ಸ್ವತಃ ತೆರಳಿ ವಧು-ವರರನ್ನು ಅಶೀರ್ವದಿಸಲಿದ್ದೇನೆ ಎಂದು ಗೊಗೊಯ್ ಹೇಳಿದ್ದಾರೆ. ಆದರೆ ಈ ಭರ್ಜರಿ ತಯಾರಿ ಬಗ್ಗೆ ಅವರಿಗೂ ಆಶ್ಚರ್ಯವಾಗಿದೆ.
ಮದುವೆಯ ವಿಧಿಯು ಚುಟುಕಾಗಿ, ಕೆಲವೇ ಕೆಲವು ಆಮಂತ್ರಿತರ ಸಮ್ಮುಖ ಶುಕ್ರವಾರ ಬೆಳಿಗ್ಗೆ ನಡೆಯಿತಾದರೂ, ವಧು ಸಿಯುಲಿ ಬ್ರಹ್ಮಾಳನ್ನು ಮೊಹಿಲರಿ ಮನೆಗೆ ಕರೆದೊಯ್ಯುವಾಗ ಮಾತ್ರ 65 ವಾಹನಗಳ ದಿಬ್ಬಣವೇ ಸಾಗಿತ್ತು.
ಇಡೀ ಖೋಖ್ರಜಾರ್ ಜಿಲ್ಲೆಯೇ ಸಾಲಂಕೃತಗೊಂಡಿತ್ತು. ಪ್ರತಿಯೊಬ್ಬ ಸರಕಾರಿ ಅಧಿಕಾರಿ ಮತ್ತು ಎಲ್ಲಾ ಸರಕಾರಿ ಇಲಾಖೆಗಳು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಈ ವಿವಾಹ ಉತ್ಸವದಲ್ಲಿ ಭಾಗವಹಿಸಿದ್ದರು. ಈ ಮೂರು ದಿನಗಳ ವಿವಾಹ ಮಹೋತ್ಸವದಲ್ಲಿ ಜನತೆಯೂ ಪಾಲ್ಗೊಂಡ ಕಾರಣದಿಂದಾಗಿ ಮೂರು ದಿನ ಮಾರುಕಟ್ಟೆಗಳು ಕೂಡ ಬಿಕೋ ಎನ್ನುತ್ತಿದ್ದವು.
ಮೂರು ಪ್ರತ್ಯೇಕ ಭೋಜನ ಶಾಲೆಗಳಿದ್ದವು. ಪ್ರತಿಯೊಂದರಲ್ಲಿ ಒಂದು ಬಾರಿ 6000 ಮಂದಿ ಕುಳಿತುಕೊಳ್ಳಬಹುದು.
|