ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್)ದ ಮುಖ್ಯಸ್ಥ ರಾಜ್ ಠಾಕ್ರೆ, ಅವರು ಉತ್ತರ ಭಾರತೀಯರ ಕುರಿತು ನೀಡಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ಅಸಮಾಧಾನ ಸೂಚಿಸಿದೆ. ರಾಜ್ ಠಾಕ್ರೆಯ ಈ ಹೇಳಿಕೆಯಿಂದಾಗಿ ಗಲಭೆಗಳೆದ್ದಿದ್ದು ಮುಂಬೈ ಹಾಗೂ ಮಹಾರಾಷ್ಟ್ರದ ಇತರೆಡೆಗಳಲ್ಲಿ ತೀವ್ರ ಹಿಂಸಾಚಾರ ಕಂಡಿತ್ತು.
ಅಲ್ಲಿನ ಪರಿಸ್ಥಿತಿ ಮತ್ತು ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ಹೇಳಿದೆ.
"ಇದು ಏಕ ರಾಷ್ಟ್ರ ಹಾಗೂ ನಾವು ಮಣ್ಣಿನ ಮಕ್ಕಳ ಸಿದ್ಧಾಂತವನ್ನು ಒಪ್ಪುವುದಿಲ್ಲ" ಎಂದು ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಮತ್ತು ಮಾರ್ಕಾಂಡೆ ಕಟ್ಜು ಅವರನ್ನೂ ಒಳಗೊಂಡಿದ್ದ ನ್ಯಾಯಪೀಠ ಹೇಳಿದೆ. ಆದರೆ ರಾಜ್ ಠಾಕ್ರೆ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿರುದ್ಧ ಯಾವುದೇ ನಿರ್ದೇಶನಗಳನ್ನು ಪಾಸು ಮಾಡಲು ನ್ಯಾಯಪೀಠ ನಿರಾಕರಿಸಿದೆ.
ಇದು ಪ್ರಾಥಮಿಕವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವಾಗಿದ್ದು, ಇದನ್ನು ರಾಜ್ಯ ಸರಕಾರದ ಗಮನಕ್ಕೆ ತರಬೇಕಾಗಿದೆ ಮತ್ತು ಅರ್ಜಿದಾರರು ಬಾಂಬೆ ಹೈಕೋರ್ಟನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
|