ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸುವ ತೀರ್ಪು ಪಡೆಯುವುದಕ್ಕಾಗಿ ಬರಹಗಾರರೊಬ್ಬರು 14 ವರ್ಷಗಳ ಸುದೀರ್ಘ ಕಾಲ ನ್ಯಾಯಾಂಗ ವಿಚಾರಣೆ ಎದುರಿಸಿದ್ದಾರೆ. ಇದರಲ್ಲಿ ಮತ್ತೊಂದು ವಿಶೇಷವೆಂದರೆ, ಇದೇ ಬರಹಗಾರ ಬರೆದದ್ದು ಬೇರೇನೂ ಅಲ್ಲ, ಕಾನೂನು ಮತ್ತು ಕಾನೂನು ಪ್ರಕ್ರಿಯೆ ಕುರಿತಾಗಿಯೇ ಹಲವು ಪುಸ್ತಕಗಳನ್ನು ಇವರು ಬರೆದಿದ್ದಾರೆ!
'ಡೆಲ್ಲಿ ಪೊಲೀಸ್ ಮ್ಯಾನ್ಯುವಲ್' ಮತ್ತು 'ಪ್ಲೀ ಬಾರ್ಗೇನಿಂಗ್- ಕಾನ್ಸೆಪ್ಟ್ ಆಂಡ್ ಪರ್ಸೆಪ್ಟ್' ಮುಂತಾದ ಕಾನೂನು ಸಂಬಂಧಿತ ಪುಸ್ತಕಗಳನ್ನು ಬರೆದಿರುವ ಲೇಖಕ ಮಹೀಂದ್ರ ಸಿಂಗ್ ಅದಿಲ್ ಅವರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕಾರಾಗೃಹ ಶಿಕ್ಷೆಯ ಜೊತೆಗೆ 84 ಸಾವಿರ ರೂ. ದಂಡವನ್ನೂ ವಿಧಿಸಿ ಮೆಟ್ರೋಪಾಲಿಟನ್ ನ್ಯಾಯಾಧೀಶ ಪ್ರೀತಮ್ ಸಿಂಗ್ ತೀರ್ಪು ನೀಡಿದ್ದಾರೆ.
ಅನ್‌ಮೋಲ್ ಪ್ರಿಂಟ್ಸ್ ಸಂಸ್ಥೆಯಿಂದ ಅದಿಲ್ ಅವರು ಸಾಕಷ್ಟು ಮುದ್ರಣ ಸಂಬಂಧಿತ ಜವಳಿಯನ್ನು ಖರೀದಿಸಿದ್ದರು. ಪ್ರಾಸಿಕ್ಯೂಶನ್ ಪ್ರಕಾರ, ಅದಿಲ್ ಅವರು 43 ಸಾವಿರ ರೂ. ಬಾಕಿ ಉಳಿಸಿಕೊಂಡಿದ್ದರು. ಬಾಕಿ ತೀರಿಸಿ ತಗಾದೆ ಮುಗಿಸುವ ನಿಟ್ಟಿನಲ್ಲಿ ಅದಿಲ್ ಅವರು ಎಂಟು ಚೆಕ್‌ಗಳನ್ನು ನೀಡಿದ್ದರು. ಆದರೆ 1994ರ ಜುಲೈ 13ರಂದು ಈ ಕಂಪನಿಯು ಚೆಕ್ ನಗದೀಕರಣಕ್ಕೆ ಯತ್ನಿಸಿದಾಗ, 'ಸಾಕಷ್ಟು ಹಣವಿಲ್ಲ' ಎಂಬ ಸಂದೇಶದೊಂದಿಗೆ ಈ ಚೆಕ್‌ಗಳು ಮರಳಿದವು.
ಅದರಂತೆ, ಅದಿಲ್‌ಗೆ ಲೀಗಲ್ ನೋಟಿಸ್ ಜಾರಿಗೊಳಿಸಿದರೂ, ಆರೋಪಿಯು ಹಣ ಪಾವತಿಸಿರಲಿಲ್ಲ. ನಂತರ 1994ರ ಸೆಪ್ಟೆಂಬರ್ 7ರಂದು ಕೇಸು ದಾಖಲಿಸಲಾಯಿತು. 14 ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ, 13 ನ್ಯಾಯಾಧೀಶರು ಈ ಕೇಸನ್ನು ಕೈಗೆತ್ತಿಕೊಂಡಿದ್ದರು ಮತ್ತು ಆಪಾದಿತ ಲೇಖಕರೇ ಸ್ವತಃ ತಮ್ಮ ಪರವಾಗಿ ವಾದ ಮಂಡಿಸುತ್ತಿದ್ದರು.
|