ಕರ್ನಾಟಕದ ಜನತೆಯ ಕುರಿತ ತನ್ನ ಹೇಳಿಕೆಯನ್ನು ಮಾಧ್ಯಮದ ಒಂದು ವರ್ಗ 'ತಪ್ಪಾಗಿ ವರದಿ' ಮಾಡಿದೆ ಎಂದು ಹೇಳಿದ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್, ತನಗೆ ಕರ್ನಾಟಕ ಮತ್ತು ಅಲ್ಲಿನ ಜನತೆಯ ಬಗ್ಗೆ ಅತ್ಯಂತ ಗೌರವವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಲೂ ಅವರು ಮಂಗಳವಾರ ಬಜೆಟ್ ಮಂಡನೆಗಿಂತ ಮುನ್ನ ಲೋಕಸಭೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದರು. ಬಿಜೆಪಿ ಸಂಸದ ಅನಂತ ಕುಮಾರ್ ಅವರು ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು, ರೈಲ್ವೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಸಾಕಷ್ಟು ಆದ್ಯತೆ ನೀಡಿಲ್ಲವೆಂದು ಪ್ರತಿಭಟನೆ ನಡೆಸಿದ ಜನತೆಯನ್ನು 'ಕಚಡಾ ಮಂದಿ' ಎಂದು ಲಾಲೂ ಹೇಳಿರುವ ವಿಚಾರವನ್ನು ಎತ್ತಿದರು.
"ಈ ಕುರಿತು ಪ್ರಶ್ನೆ ಎತ್ತುತ್ತಿರುವಂತೆ, ಕೊಳಕು ವಿಚಾರಗಳನ್ನು ಎತ್ತಬೇಡಿ ಅಂದಿದ್ದೆ. ಇದನ್ನು ಮಾಧ್ಯಮಗಳು, ತಾನು 'ಕಚಡಾ ಮಂದಿ' ಎಂದು ಹೇಳಿರುವುದಾಗಿ ವರದಿ ಮಾಡಿವೆ" ಎಂದು ಲಾಲೂ ಅನಂತ್ ಕುಮಾರ್ ಅವರಿಗೆ ಉತ್ತರಿಸುತ್ತಾ ನುಡಿದರು.
ತನಗೆ ಕರ್ನಾಟಕದ ಮಂದಿಯ ಕುರಿತು ಉತ್ತಮ ಭಾವನೆ ಇದೆ. ಅಲ್ಲದೆ ರಾಷ್ಟ್ರವು ಕರ್ನಾಟಕ ವ್ಯಕ್ತಿಯನ್ನು ಪ್ರಧಾನಿಯಾಗಿ ಆರಿಸಿದೆ ಎಂಬುದನ್ನು ಲಾಲೂ ಪುನರುಚ್ಚರಿಸಿದರು. 1996ರಲ್ಲಿ ಸಂಯುಕ್ತ ರಂಗ ಸರಕಾರ ಅಸ್ತಿತ್ವಕ್ಕೆ ಬಂದಾಗ ದೇವೇಗೌಡರು ಪ್ರಧಾನಿಯಾಗಲು ಬೆಂಬಲಿಸಿದ ವಿಚಾರವನ್ನು ಅವರು ಪ್ರಸ್ತಾಪಿಸಿದರು.
|