ಲಾಲೂ ಪ್ರಸಾದ್ ಯಾದವ್ ತಮ್ಮ ಚುನಾವಣಾ ಪ್ರೇರಿತ, ಆಮ್ ಅದ್ಮಿ ಬಜೆಟ್ ಮಂಡಿಸುತ್ತಿರುವಾಗ, ಅತ್ತ ವಿರೋಧ ಪಕ್ಷಗಳು, ಲಾಲೂ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೋಲಾಹಲ, ಗಲಭೆ ಎಬ್ಬಿಸಿ ಸಭಾತ್ಯಾಗ ನಡೆಸಿದರು.
ಎಡಪಕ್ಷಗಳು, ಸಮಾಜವಾದಿ, ಬಹುಜನಸಮಾಜವಾದಿ ಪಕ್ಷಗಳು ಲಾಲೂ ವಿರುದ್ಧ ಘೋಷಣೆಗಳನ್ನು ಕೂಗಿದರು. ಏತನ್ಮಧ್ಯೆ, ತಮ್ಮ ಪ್ರಾಂತ್ಯಗಳನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ದೂರಿದ ಕೆಲವು ಕಾಂಗ್ರೆಸ್ ಸಂಸದರೂ, ಲಾಲೂ ವಿರುದ್ಧ ದನಿ ಎತ್ತಿದ್ದಾರೆ. ಕರ್ನಾಟಕದ ಪಾಲಿಗೆ ಬರೀ ರೈಲು ಬಿಟ್ಟ ರೈಲ್ವೆ ಬಜೆಟನ್ನು ಖಂಡಿಸಿದ ಕರ್ನಾಟಕದ ಸಂಸದರೂ ಸಭಾತ್ಯಾಗ ನಡೆಸಿದರು.
ಲಾಲೂ ಬಜೆಟ್‌ನಿಂದ ಅಸಮಾಧಾನಗೊಂಡ ಸಂಸದರು ರೆಕ್ಕೆಬಿಚ್ಚಿ ಗಲಭೆ ನಡೆಸುತ್ತಿರುವಂತೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಿಯರಂಜನ್ ದಾಸ್‌ಮುನ್ಶಿ, 'ಉದ್ರಿಕ್ತ' ಸಂಸದರನ್ನು ತಣ್ಣಗಾಗಿಸಲು ವಿಫಲ ಯತ್ನ ಮಾಡುತ್ತಿದ್ದರು.
ಲಾಲೂ ಬಜೆಟ್‌ಗೆ ತೀವ್ರ ವಿರೋಧ ಸೂಚಿಸಿದ ಅತೃಪ್ತ ಸಂಸದರು ತನ್ನ ಭಾಷಣದ ಉಳಿದ ಭಾಗವನ್ನು ಮೇಜಿನ ಮೇಲಿರಿಸಿ ಕುಳಿತುಕೊಳ್ಳುವಂತೆ ಸೂಚಿಸಲು ಸ್ಪೀಕರ್ ಸೋಮನಾಥ್ ಚಟರ್ಜಿ ವಿರುದ್ಧ ಒತ್ತಡ ಹೇರಿದರು. ಲಾಲೂ ಅಲ್ಪ ಸಮಯ ತನ್ನ ಭಾಷಣವನ್ನು ಮುಂದುವರಿಸಿದರಾದರೂ, ಒಂದು ಹಂತದಲ್ಲಿ ಭಾಷಣವನ್ನು ನಿಲ್ಲಿಸಿದರು.
ಹೆಚ್ಚಿನ ಪ್ರಾಂತ್ಯಗಳಿಗೆ ಅನುಕೂಲ ನೀಡಿ, ಪ್ರಯಾಣ ದರ ಏರಿಸದೆ, ಮತ್ತಿತರ ಸವಲತ್ತುಗಳನ್ನು ರೈಲ್ವೆ ಸಚಿವರು ಘೋಷಿಸಿದರಾದರೂ, ತಮ್ಮ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ನಿರಾಶರಾದ ಸಂಸದರು ಸಭಾತ್ಯಾಗ ಮಾಡಿದರು.
ಪಶ್ಚಿಮ ಬಂಗಾಳ ಮತ್ತು ಕೇರಳದ ಸಿಪಿಐ(ಎಂ) ಸಂಸದರು ಪ್ರತಿಭಟನಾ ವಿಚಾರದಲ್ಲಿ ಇಬ್ಭಾಗವಾಗಿದ್ದುದು ಕುತೂಹಲಕಾರಿಯಾಗಿತ್ತು. ಪಶ್ಚಿಮ ಬಂಗಾಳವನ್ನು ನಿರ್ಲಕ್ಷಿಸಲಾಗಿದೆ ಎಂದು ಅಲ್ಲಿನ ವಾಮರು ಗಲಭೆ ಎಬ್ಬಿಸಿದರೆ, ಕೇರಳಲ್ಲಿ ಲೋಕೋಮೋಟಿವ್ ಫ್ಯಾಕ್ಟರಿ ಸ್ಥಾಪನೆಯ ಘೋಷಣೆಯಿಂದ ಸಂತೃಪ್ತರಾದಂತೆ ಕಂಡುಬಂದ ಅವರ ಸಹವರ್ತಿಗಳು ಶಾಂತವಾಗಿ ಕುಳಿತಿದ್ದರು.
|