ಲಾಲೂರವರ ರೈಲ್ವೆ ಬಜೆಟ್ ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದ್ದು, ಬಿಜೆಪಿ ಆಡಳಿತದ ರಾಜ್ಯಗಳನ್ನು, ಅದರಲ್ಲೂ ವಿಶೇಷವಾಗಿ ಗುಜರಾತ್ ಮತ್ತು ಮಧ್ಯಪ್ರದೇಶವನ್ನು ನಿರ್ಲಕ್ಷಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕಿ ಸುಶ್ಮಾ ಸ್ವರಾಜ್ ಆರೋಪಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ಲೋಕಸಭೆಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿರುವುದೇ ಲಾಲೂ ಪ್ರಸಾದ್‌ರ ರೈಲ್ವೆ ಬಜೆಟ್‌ನ ಪೊಳ್ಳುತಕ್ಕೆ ಸಾಕ್ಷಿ ಎಂದು ಬಿಜೆಪಿ ಉಪಾಧ್ಯಕ್ಷ ವಿಕೆ ಮಲ್ಹೊತ್ರಾ ದೂರಿದ್ದಾರೆ.
ಚುನಾವಣೆ ಹೋಗುವ ಮುನ್ನ ಮಂಡನೆಯಾದ ಯುಪಿಎಯ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತಕ್ಕೀಡಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಮೋಹನ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ಈ ರೈಲ್ವೇ ಬಜೆಟನ್ನು ಹಣಕಾಸು ಸಚಿವ ಚಿದಂಬರಂ ಸಿದ್ಧ ಪಡಿಸಿದರೋ ಅಥವಾ ಲಾಲೂ ಪ್ರಸಾದ್ ಸಿದ್ಧಪಡಿಸಿದರೋ ಎಂದು ಹೇಳಿರುವ ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತ, ಈ ಬಜೆಟ್ ಮಧ್ಯಮ ವರ್ಗ ಸಂಪನ್ನವಾಗಿದ್ದು, ಸ್ಥಳೀಯ ರೈಲು ಪ್ರಯಾಣಿಕರು ಹಾಗೂ ಮಾಸಿಕ ಟಿಕೆಟ್‌ದಾರರಿಗಾಗಿ ಯಾವುದೇ ಲಾಭವನ್ನು ಹೊಂದಿಲ್ಲ ಎಂದು ಹೇಳಿದರು.
ಈ ಕಡೆ ತಮ್ಮದೇ ಪಕ್ಷದ ಸಹವರ್ತಿ ಸುಧಾಕರ್ ರೆಡ್ಡಿ ಲಾಲೂ ರೈಲ್ವೇ ಬಜೆಟನ್ನು ಟೀಕಿಸಿದ್ದು, ಇದು ಸಂಕುಚಿತ ಮತ್ತು ಸಮತೋಲನ ರಹಿತ ಬಜೆಟ್ ಆಗಿದ್ದು, ಇದರಿಂದ ಮಧ್ಯಮ ವರ್ಗವನ್ನು ಒಲೈಸಲಾಗಿದೆಯೇ ಹೊರತು ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನ ಸಿಗಲಿಲ್ಲ ಎಂದು ದೂರಿದ್ದಾರೆ.
|