ಆರ್ಥಿಕ ಮತ್ತು ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ನಡೆಸಬಾರದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಇದು ಕಾರ್ಯಾಂಗ ಮತ್ತು ಶಾಸಕಾಂಗದ ವ್ಯಾಪ್ತಿಯ ಅತಿಕ್ರಮಣವಾಗುತ್ತದೆ ಎಂದು ಎಚ್ಚರಿಸಿದೆ. ಆರ್ಥಿಕ ನೀತಿಯಲ್ಲಿ ತಜ್ಞರ ಯೋಜನೆಗಳು ಒಳಗೊಂಡಿರುತ್ತವೆಯಾದ್ದರಿಂದ ನ್ಯಾಯಾಲಯಗಳು, ಅದು ಅಸಾಂವಿಧಾನಿಕವಾಗಿರದ ಹೊರತು ಇಂತಹ ವಿಚಾರಗಳಲ್ಲಿ ಮೂಗುತೂರಿಸಬಾರದು ಎಂದು ಹೇಳಿದೆ.
ನೋಂದಣಿ ವೇಳೆಗಿನ ಆಸ್ತಿಯ ಅಪಮೌಲ್ಯೀಕರಣವನ್ನು ತಡೆಯಲು ಆಂಧ್ರ ಪ್ರದೇಶ ಸರಕಾರವು ತಂದಿರುವ ಶಾಸನವನ್ನು ಎತ್ತಿಹಿಡಿಯುತ್ತಾ ಸರ್ವೋಚ್ಛ ನ್ಯಾಯಾಲಯ ಈ ಅಭಿಪ್ರಾಯ ಸೂಚಿಸಿದೆ.
ನ್ಯಾಯಾಲಯವು ಆರ್ಥಿಕ ಅಥವಾ ಆಡಳಿತಾತ್ಮಕ ತಜ್ಞರನ್ನು ಒಳಗೊಂಡಿರುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅದು ಪರಿಣತಿ ಹೊಂದಿಲ್ಲ, ಈ ವಿಶೇಷ ಯುಗದಲ್ಲಿ, ಪ್ರಸ್ತುತ ಕ್ಷೇತ್ರದಲ್ಲಿ ತಜ್ಞರ ಸಲಹೆಗಳೊಂದಿಗೆ ನೀತಿಗಳು ಅಪರಿಮಿತವಾದ ಕಾಳಜಿಯೊಂದಿಗೆ ರೂಪಿಸಲಾಗುತ್ತಿದ್ದು, ಕಾರ್ಯಾಂಗ ಮತ್ತು ಶಾಸಕಾಂಗದ ವ್ಯಾಪ್ತಿಯನ್ನು ನ್ಯಾಯಾಲಯವು ಅತಿಕ್ರಮಿಸುವುದು ಅವಿವೇಕತನ ಎಂದು ನ್ಯಾಯಮೂರ್ತಿಗಳಾದ ಎಚ್.ಕೆ.ಸೇಮ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಶಾಸನವು ಅಸಾಂವಿಧಾನಿಕ ಎಂದು ಆಂಧ್ರ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅಪೆಕ್ಸ್ ನ್ಯಾಯಾಲಯ ತಳ್ಳಿಹಾಕಿದ್ದು, ಸರಕಾರದ ಕ್ರಮವನ್ನು ಎತ್ತಿ ಹಿಡಿದಿದೆ.
|