ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಚುನಾವಣಾ ಆಯೋಗವು ಚುನಾವಣೆ ಸಿದ್ಧತೆಗಳ ಪರಿಶೀಲನೆಗಾಗಿ ಮಾರ್ಚ್ 4ರಂದು ರಾಜ್ಯಕ್ಕೆ ಒಂದು ದಿನದ ಭೇಟಿ ನೀಡಲು ನಿರ್ಧರಿಸಿದೆ.
ಈ ವೇಳೆ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ನೇತೃತ್ವ ತಂಡವು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ರಾಜಕೀಯ ನಾಯಕರನ್ನು ಭೇಟಿಯಾಗಲಿದ್ದಾರೆಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕ್ಷೇತ್ರಪುನರ್ವಿಂಗಡಣೆಗೆ ಅನುಮತಿ ನೀಡಿದ ಬೆನ್ನಿಗೆ ರಾಷ್ಟ್ರಪತಿ ಆಳ್ವಿಕೆಯಿರುವ ರಾಜ್ಯಕ್ಕೆ ಆಯೋಗದ ಭೇಟಿಯು ಮಹತ್ವ ಪಡೆದಿದೆ. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯು ಜಾರಿಯಲ್ಲಿದ್ದು ಆರು ತಿಂಗಳ ಕಾಲಾವಧಿ ಮೇ 28ರಂದು ಮುಕ್ತಾಯವಾಗಲಿದೆ.
ಕ್ಷೇತ್ರ ಪುನರ್ವಿಂಗಡಣೆಗೆ ಅಧಿಸೂಚನೆ ಹೊರಡಿಸಿದ್ದು, ಇದರಡಿ ರಾಜ್ಯದಲ್ಲಿ ಚುನಾವಣೆ ನಡೆಸಲು 6 ತಿಂಗಳ ಕಾಲಾವಧಿ ಅಗತ್ಯವಿದೆಯೆಂದು ಹೇಳಿದ್ದ ಮುಖ್ಯ ಚುನಾವಣಾ ಆಯುಕ್ತರು, ಆಗಸ್ಟ್‌ನಲ್ಲಿ ನಡೆಯಬಹುದೆಂದು ಇಂಗಿತ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ನಿಯೋಗವು ಇತ್ತೀಚೆಗೆ ಆಯೋಗವನ್ನು ಭೇಟಿ ಮಾಡಿ ಮೇ 28ರೊಳಗೆ ರಾಜ್ಯದಲ್ಲಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದನ್ನು ನೆನಪಿಸಬಹುದು.
|