ಕಾಂಗ್ರೆಸ್ ನೇತೃತ್ವ ಯುಪಿಎ ಸರಕಾರದ ಧೋರಣೆಯಿಂದಾಗಿ ಕೃಷಿರಂಗ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಆರೋಪಿಸಿ ಸದನಗಳು ಆರಂಭಗೊಳ್ಳುತ್ತಿರುವಂತೆ ಸತತ ಮೂರನೆಯ ದಿನವಾದ ಇಂದೂ ವಿಪಕ್ಷಗಳು ಗದ್ದಲ ಎಬ್ಬಿಸಿದ ಕಾರಣ ಉಭಯ ಸದನಗಳು ಎರಡು ಬಾರಿ ಮುಂದೂಡಲ್ಪಟ್ಟವು. ಈ ಮಧ್ಯೆ ಸದನವನ್ನು ನಾಳೆಗೆ ಮುಂದೂಡುವ ಮುನ್ನ ಆರ್ಥಿಕ ಸಮೀಕ್ಷೆಯನ್ನು ಎರಡೂ ಸದನಗಳಲ್ಲಿ ಒಪ್ಪಿಸಲಾಯಿತು.
ಲೋಕ ಸಭೆಯಲ್ಲಿ ಎನ್‌ಡಿಎ ಹಾಗೂ ಇತರ ಪಕ್ಷಗಳು ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕೋಲಾಹಲವೆಬ್ಬಿಸಿದರು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಎನ್‌ಡಿಎ, ಎಸ್ಪಿ, ಹಿಎಸ್ಪಿ, ಟಿಡಿಪಿ ಹಾಗೂ ಎಜಿಪಿಗಳು ಸದನದ ಭಾವಿಗೆ ತೆರಳಿ ಪ್ರತಿಭಟನೆ ನಡೆಸಲಾರಂಭಿಸಿದರು. 'ಕಿಸಾನ್ ಕಾ ಪೂರಾ ಕರ್ಝಾ ಮಾಫ್ ಕರೋ' ಎಂಬ ಘೋಷಣೆಗಳನ್ನು ಕೂಗಿದ ಸದಸ್ಯರಿಗೆ ಎಡಪಕ್ಷಗಳ ಸದಸ್ಯರೂ ತಮ್ಮ ಸ್ಥಳಗಳಲ್ಲೇ ಎದ್ದು ನಿಂತು ಬೆಂಬಲ ಸೂಚಿಸಿದರು.
ರಾಜ್ಯಸಭೆಯಲ್ಲೂ ವಿರೋಧ ಪಕ್ಷಗಳು ಸಾಲಮನ್ನಾಗೆ ಒತ್ತಾಯಿಸಿದರು. ಎನ್‌ಡಿಎ ಹಾಗೂ ಇತರ ವಿರೋಧ ಪಕ್ಷಗಳು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಒತ್ತಾಯಿಸಿ ಕೋಲಾಹಲವೆಬ್ಬಿಸಿದರು.
ಈ ಹಿನ್ನೆಲೆಯಲ್ಲಿ ಎರಡೂ ಸದನಗಳನ್ನು 12 ಗಂಟೆನತಕ ಮುಂದೂಡಲಾಯಿತು. 12 ಗಂಟೆಗೆ ಸಭೆ ಸೇರಿದಾಗಲೂ ಗದ್ದಲ ಮುಂದುವರಿದ ಕಾರಣ ಉಭಯ ಸದನಗಳನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಲೋಕಸಭೆಯು ಶುಕ್ರವಾರ 11 ಗಂಟೆಗೆ ಬಜೆಟ್ ಮಂಡನೆಗೆ ಸೇರಲಿದ್ದರೆ, ರಾಜ್ಯಸಭೆಯು ಅಪರಾಹ್ನ ಒಂದು ಗಂಟೆಗೆ ಸಭೆ ಸೇರಲಿದೆ.
|