ಸೇತುಸಮುದ್ರಂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಬೇಕಿರುವ ಅಫಿದಾವಿತನ್ನು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಗುರವಾರ ಅಂತಿಮಗೊಳಿಸಿದೆ.
ವಿವಾದಾಸ್ಪದ ಯೋಜನೆಗೆ ನೀಡಲಾಗಿರುವ ತಡೆಯನ್ನು ತೆರವುಗೊಳಿಸಲು ವಿನಂತಿಸಲಿರುವ 90 ಪುಟಗಳ ಅಫಿದಾವಿತನ್ನು ಸಮಿತಿಯು ಅಂಗೀಕರಿಸಿದ್ದು, ಈ ಕುರಿತು ಹುಟ್ಟಿದ್ದ ಭಿನ್ನಮತ ಶಮನವಾಗಿದೆ.
ಸೇತುಸಮುದ್ರಂ ಕುರಿತು ತೆಗೆದುಕೊಳ್ಳಲಾಗಿದ್ದ ನಿರ್ಣಯದಿಂದಾಗಿ ಸರಕಾರದೊಳಗೆ ಭಿನ್ನಾಭಿಪ್ರಾಯ ಹುಟ್ಟಿತ್ತು. ಶ್ರೀಲಂಕಾ ಹಾಗೂ ಭಾರತದ ನಡುವಿನ 'ರಾಮಸೇತು' ನೈಸರ್ಗಿಕವಾದುದೇ ಇಲ್ಲವೇ, ಮಾನವನಿರ್ಮಿತವೇ ಎಂಬ ಕುರಿತು ಅಧ್ಯಯನ ನಡೆಸದಿರುವ ಕಾರಣ ಈ ಕುರಿತು ನಿಗಾವಹಿಸಬೇಕೆಂದು ಸಂಸ್ಕೃತಿ ಸಚಿವಾಲಯ ಎಚ್ಚರಿಕೆ ನೀಡಿದ ಕಾರಣ ಸಚಿವರ ಸಮೂಹದಲ್ಲಿ ಭಿನ್ನಾಭಿಪ್ರಾಯ ಹುಟ್ಟಿತ್ತು.
ಆದರೆ, ನೌಕಾಯಾನ ಸಚಿವಾಲಯವು ಇದು ಸಂಪೂರ್ಣವಾಗಿ ನೈಸರ್ಗಿಕವಾಗಿ ರೂಪುಗೊಂಡಿದೆ ಎಂದು ಪ್ರತಿಪಾದಿಸಲು ಇಚ್ಛಿಸಿದೆ.
ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ, ಇಂಧನ ಸಚಿವ ಸುಶಿಲ್ ಕುಮಾರ್ ಶಿಂಧೆ, ಶಿಪ್ಪಿಂಗ್ ಸಚಿವ ಟಿ.ಆರ್.ಬಾಲು ಹಾಗೂ ಇತರರು ಪಾಲ್ಗೊಂಡಿದ್ದರು. ಈ ಕುರಿತಂತೆ ಅಫಿದಾವಿತ್ ಸಲ್ಲಿಸಲು ಸುಪ್ರೀಂ ಕೋರ್ಟ್ ಜನವರಿ 31ರಂದು ನಾಲ್ಕುವಾರಗಳ ಕಾಲ ಸಮಯಾವಕಾಶ ನೀಡಿದ್ದು, ಮಾರ್ಚ್ ಮೊದಲ ವಾರದಲ್ಲಿ ಸರಕಾರ ಇದನ್ನು ಸಲ್ಲಿಸಬೇಕಾಗಿದೆ.
|