ಸರಕಾರಿ ಉದ್ಯೋಗಿ ಸೇವೆಯಲ್ಲಿರುವಾಗ ಮರಣ ಹೊಂದಿದಲ್ಲಿ, ಆತ ಅಥವಾ ಆಕೆಯ ಅವಲಂಬಿಗಳು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವುದು ಅವರ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಈ ವಿಚಾರವು ಮೃತ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಗಳನ್ನು ಅವಲಂಬಿಸಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಪಿ.ನವೊಲೆಕರ್ ಮತ್ತು ಎಲ್.ಎಸ್.ಪಂಥ ಅವರನ್ನೊಳಗೊಂಡ ನ್ಯಾಯಪೀಠವು, ಅನುಕಂಪದ ಆಧಾರದಲ್ಲಿ ಆಂಧ್ರ ಸರಕಾರವು ಸರ್ವರುನ್ನಿಸ ಬೇಗಮ್ ಎಂಬ ವಿಧವೆಗೆ ಉದ್ಯೋಗ ನೀಡಬೇಕೆಂಬ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುತ್ತಾ ಈ ಮಹತ್ವದ ತೀರ್ಪು ನೀಡಿದೆ.
ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರ ಪತಿ ಕರ್ತವ್ಯ ನಿರ್ವಹಣೆ ವೇಳೆ ಸಾವನ್ನಪ್ಪಿದ್ದರು. "ಕರ್ತವ್ಯದ ವೇಳೆ ಉದ್ಯೋಗಿ ಮರಣಹೊಂದಿದ್ದಲ್ಲಿ, ಅದು ಆತನ ಕುಟುಂಬದ ಜೀವನನಿರ್ಹವಣೆಯ ಆದಾಯ ಮೂಲವಾಗುವುದಿಲ್ಲ. ಸರಕಾರ ಅಥವಾ ಸಾರ್ವಜನಿಕ ಪ್ರಾಧಿಕಾರವು ಮೃತವ್ಯಕ್ತಿಯ ಕುಟುಂಬದ ಹಣಕಾಸು ಸ್ಥಿತಿಯ ಕುರಿತು ಪರೀಕ್ಷಿಸಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸಂದರ್ಭದಲ್ಲಿ 1994ರಲ್ಲಿ ಉಮೇಶ್ ಕುಮಾರ್ ನಾಗ್‌ಪಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ನ್ಯಾಯಾಲಯ ಉದ್ಧರಿಸಿತು.
ಪ್ರಸ್ತುತ ಪ್ರಕರಣದಲ್ಲಿ ಬೇಗಂ, ಮೊದಲಿಗೆ ಅನುಕಂಪ ಆಧಾರದ ಉದ್ಯೋಗದ ಬದಲಿಗೆ ವಿಶೇಷ ಯೋಜನೆಯಡಿ ಹಣಕಾಸು ಅನುಕೂಲವನ್ನು ಆಯ್ದುಕೊಂಡಿದ್ದರು. ಬಳಿಕ, ತಾನು ಹಣಕಾಸು ನೆರವನ್ನು ಹಿಂತಿರುಗಿಸಿ ಅನುಕಂಪದ ಆಧಾರದಲ್ಲಿ ಉದ್ಯೋಗ ಹೊಂದಲು ಬಯಸುವುದಾಗಿ ಹೇಳಿದ್ದರು. ಅವರ ಈ ಕೋರಿಕೆಯನ್ನು ಸಾರಿಗೆ ನಿಗಮವು ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ಬೇಗಂ ಆಂಧ್ರ ಹೈಕೋರ್ಟಿನ ಏಕಸದಸ್ಯ ಪೀಠದ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಪೀಠವು 'ಆಹಾರ ಗಳಿಕಾ' ಯೋಜನೆಯಡಿ ವಿಧವೆಗೆ ಉದ್ಯೋಗ ನೀಡಲು ಆದೇಶಿಸಿತ್ತು. ನಿಗಮವು ಈ ತೀರ್ಪನ್ನು ವಿಭಾಗೀಯ ಪೀಠಕ್ಕೆ ಅರ್ಜಿಸಲ್ಲಿಸಿ ಪ್ರಶ್ನಿಸಿತ್ತು. ವಿಭಾಗೀಯ ಪೀಠವು ಏಕಸದಸ್ಯ ಪೀಠದ ತೀರ್ಪಿನ್ನು ನವೀಕರಿಸಿ, ಆಕೆಗೆ ನಿರ್ವಾಹಕಿ ಅಥವಾ ಅಟೆಂಡರ್ ಸ್ಥಾನ ಕಲ್ಪಿಸಬೇಕು ಎಂದು ಆದೇಶಿಸಿತ್ತು. ನಿಗಮವು ಈ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
|