ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯ ಮೇಲಿನ ದೌರ್ಜನ್ಯವು ಲೋಕಸಭೆಯಲ್ಲಿ ಗದ್ದಲವೆಬ್ಬಿಸಿದ್ದು, ಎಂಎನ್ಎಸ್ ಮುಖ್ಯಸ್ಥ ರಾಜ್‌ಠಾಕ್ರೆಯನ್ನು ಮೊಕಾ ಕಾಯ್ದೆಯಡಿ ಬಂಧಿಸಿ ಅವರ ಮತದಾನದ ಹಕ್ಕನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.
ಜಿಡಿಯು, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದ ಸದಸ್ಯರು, (ಇವರಲ್ಲಿ ಹೆಚ್ಚಿನವರು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು) ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲಿನ ದಾಳಿಗೆ ಕಳವಳ ವ್ಯಕ್ತಪಡಿಸಿದ್ದು, ಇದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಬೆದರಿಕೆಯೊಡ್ಡಿದೆ ಎಂದು ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನಾ ನಾಯಕ ಅನಂತ್ ಅವರು, ಇದು ತೀರಾ ಉತ್ಪ್ರೇಕ್ಷೆಯಾಗಿದ್ದು, ಮಂಬೈ ಹಾಗೂ ಮಹಾರಾಷ್ಟ್ರದ ಇತರೆಡೆಗಳಲ್ಲಿ ಉತ್ತರ ಭಾರತೀಯರು ಬೆದರಿಕೆಯಲ್ಲಿ ಇಲ್ಲ ಎಂದು ನುಡಿದರು. ಅವರ ಈ ಹೇಳಿಕೆಯು ಬಲವಾದ ಪ್ರತಿಭಟನೆಗಳಿಗೆ ಕಾರಣವಾಯಿತು. ಹಲವಾರು ಸದಸ್ಯರು ಗಲಭೆ ಎಬ್ಬಿಸಿದ್ದು, ಇದು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲು ಕಾರಣವಾಯಿತು.
ಬಳಿಕ ಸದನ ಮತ್ತೆ ಸೇರಿದಾಗ, ಸದಸ್ಯರ ವರ್ತನೆಗೆ ಸ್ಪೀಕರ್ ಸೋಮನಾಥ ಚಟರ್ಜಿ ತೀವ್ರ ಅಸಂತುಷ್ಟಿ ವ್ಯಕ್ತಪಡಿಸಿದರು.
|