ಕಾನೂನು ನಿರ್ಮಾತೃಗಳು ಪ್ರಜಾಪ್ರಭುತ್ವವನ್ನು ಮುಗಿಸಿ ಹಾಕಲು ಅವಧಿಮೀರಿ ಕೆಲಸಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಎರಡುದಿನಗಳ ಹಿಂದಷ್ಟೆ ಹೇಳಿರುವ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, "ಸದನವೊಂದು ತಮಾಷೆಯ ಸ್ಥಳವಾಗುತ್ತಿದೆ" ಎಂದು ಸೋಮವಾರ ಹೇಳಿದ್ದು ಸದಸ್ಯರ ವರ್ತನೆಗೆ ತೀವ್ರ ಅಸಮಾಧಾನ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರ ಮೇಲಿನ ದಾಳಿಯು ಸದನದಲ್ಲಿ ಪ್ರಸ್ತಾಪವಾದಾಗ ಉಂಟಾದ ಗದ್ದಲ ಮತ್ತು ಈ ವಿಷಯದ ಕುರಿತು ಮಾತನಾಡಲಿಚ್ಛಿಸಿದ ಸದಸ್ಯರು ಅನುಚಿತ ಮಾತುಗಳನ್ನಾಡಿದಾಗ ತೀವ್ರ ಸಿಟ್ಟುಗೊಂಡ ಚಟರ್ಜಿ ಮೇಲಿನ ಮಾತನ್ನು ಹೇಳಿದ್ದಾರೆ.
"ನೀವು ನನಗೇನು ಕೆಲಸಕೊಟ್ಟಿದ್ದೀರಿ? ಈ ಕೆಲಸದಿಂದ ನಾನು ಕಳಚಿಕೊಳ್ಳಲು ಇಷ್ಟಪಡುತ್ತೇನೆ" ಎಂದು ಕೋಲಾಹಲದ ನಡುವೆಯೇ ಹೇಳಿದ ಅವರು, ಅಧ್ಯಕ್ಷರ ಮಾತುಗಳನ್ನು ಆಲಿಸಲು ಯಾರು ಸಿದ್ಧರಿಲ್ಲ ಎಂಬ ವಿಶಾದ ವ್ಯಕ್ತಪಡಿಸಿದರು.
"ಇದೇನು ತಮಾಷೆಯೇ? ಯಾರು, ಯಾವಾಗ ಬೇಕಿದ್ದರೂ ಎದ್ದುನಿಂತು ಅಧ್ಯಕ್ಷರಿಗೆ ಅಪ್ಪಣೆ ನೀಡಬಹುದೇ? ಎಂದವರು ಖಾರವಾಗಿ ಪ್ರಶ್ನಿಸಿದರು. "ನಾನು ಅನುಮತಿಸದ ಯಾವುದೇ ವಿಚಾರವನ್ನು ಯಾವುದೇ ಸದಸದ್ಯರು ಎತ್ತುವಂತಿಲ್ಲ, ಆದರೂ ನೀವದನ್ನು ಮಾಡುತ್ತಿದ್ದೀರಿ" ಎಂದವರು ಖಾರವಾಗಿ ನುಡಿದರು.
ಹೆಚ್ಚಿನ ಸದಸ್ಯರಿಂದ ಟೀಕೆಗೊಳಪಟ್ಟು, ಇದ್ದಕ್ಕಿದ್ದಂತೆ ಸದನದ ಮುಂದೂಡಿಕೆಗೆ ಕಾರಣವಾದ ಶಿವಸೇನಾ ಸದಸ್ಯ ಅನಂತ್ ಅವರ ಹೇಳಿಕೆಯನ್ನೂ ಸಹ ಅವರು ಖಂಡಿಸಿದರು.
ಸದನವು ಮತ್ತೆ ಸೇರುತ್ತಲೆ, "ರಾಷ್ಟ್ರವನ್ನು ಒಡೆಯುವಂತಹ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದರಲ್ಲಿ ನಾನೊಂದು ಪಕ್ಷವಾಗ ಬಯಸುವುದಿಲ್ಲ. ನಾನಿದನ್ನು ಅಂಗೀಕರಿಸುವುದಿಲ್ಲ" ಎಂದು ನುಡಿದರಲ್ಲದೆ, ಆ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಲು ನಿರ್ದೇಶಿಸಿದರು.
ಪ್ರಜಾಪ್ರಭುತ್ವವನ್ನು ಮುಗಿಸಲು 'ಒವರ್‌ಟೈಂ' ಕಳೆದ ವಾರವೂ ಸದಸ್ಯರ ಅನುಚಿತ ವರ್ತನೆಯಿಂದ ತೀವ್ರವಾಗಿ ಸಿಟ್ಟುಗೊಂಡಿದ್ದ ಚಟರ್ಜಿಯವರು, ಸದಸ್ಯರಿಗೆ ಛೀಮಾರಿ ಹಾಕಿದ್ದು, "ನೀವು ಪ್ರಜಾಪ್ರಭುತ್ವವನ್ನು ಮುಗಿಸಲು ಒವರ್‌ಟೈಂ ಕೆಲಸಮಾಡುತ್ತಿದ್ದೀರಿ. ನೀವು ಕೆಲಸಮಾಡಲು ಇಚ್ಛಿಸುತ್ತಿಲ್ಲ ಎಂಬುದು ಅತ್ಯಂತ ದುಃಖದ ವಿಚಾರ" ಎಂದು ಸದಸ್ಯರು ರೈತರ ಸಾಲಮನ್ನಾಗೆ ಒತ್ತಾಯಿಸಿ ಸದನದ ಬಾವಿಗೆ ಧುಮುಕಲು ಧಾವಿಸಿದಾಗ ಪ್ರತಿಕ್ರಿಯಿಸಿದ್ದರು. ಈ ಕೋಲಾಹಲವೂ ಸದನದ ಮುಂದೂಡಿಕೆಗೆ ಕಾರಣವಾಗಿತ್ತು.
|