ಕಳೆದ 35 ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿದ್ದ ಕಾಶ್ಮೀರ್ ಸಿಂಗ್ ಎಂಬ ಭಾರತೀಯ ಪ್ರಜೆಗೆ ಮುಕ್ತಿ ಲಭಿಸಿದೆ. ಕಾಶ್ಮೀರ್ ಸಿಂಗ್‌ಗೆ ಇದು ಮರು ಹುಟ್ಟು. ಬೇಹುಗಾರಿಕೆ ಮತ್ತು ಕಳ್ಳಸಾಗಣಿಕೆ ಆರೋಪದಲ್ಲಿ 1973ರಲ್ಲಿ ಬಂಧನಕ್ಕೀಡಾಗಿದ್ದ ಸಿಂಗ್‌ಗೆ ಪಾಕಿಸ್ತಾನ ಮರಣದಂಡನೆ ವಿಧಿಸಿತ್ತು.
ಮರಣದಂಡನೆ ಆರೋಪಿಗೆ ಪಾಕ್ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಕ್ಷಮಾದಾನ ನೀಡಿದ್ದು, ಪಾಕಿಸ್ತಾನದ ಆಂತರಿಕ ಸಚಿವಾಲಯವು ಅವರ ಬಿಡುಗಡೆ ಆದೇಶ ನೀಡಿದೆ.
ಪಂಜಾಬಿನ ಹೋಶಿಯಾರ್‌ಪುರದ ನಿವಾಸಿಯಾಗಿರುವ ಕಾಶ್ಮೀರ್ ಸಿಂಗ್ ತನ್ನ ಜೀವನದ ಪರ್ವಕಾಲವನ್ನು ಜೈಲಿನಲ್ಲೇ ಕಳೆದಿದ್ದರು. ಮರಣದಂಡನೆ ವಿಧಿಸಲ್ಪಟ್ಟಿದ್ದ ಸಿಂಗ್ ಅವರ ಆಯಸ್ಸು ಮತ್ತು ಅದೃಷ್ಟ ಎರಡೂಗಟ್ಟಿ ಇತ್ತು. ಒಂದಿಲ್ಲ ಒಂದು ಕಾರಣಕ್ಕೆ ಅವರ ಮರಣ ದಂಡನೆ ಮುಂದೂಡುತ್ತಲೇ ಹೋಗಿತ್ತು. ಕತ್ತಲೆ ಕೋಣೆಯಲ್ಲಿ ಏಕಾಂಗಿಯಾಗಿ ದಿನ ದೂಡಿದ ಅವರ ಮನೋಬಲದ ಆಧಾರದಲ್ಲಿಯೇ ಅವರಿನ್ನೂ ಆರೋಗ್ಯವಾಗಿದ್ದಾರೆ.
ಕಾಶ್ಮೀರ್ ಸಿಂಗ್ ಅವರ ಪತ್ನಿ ಪರಮ್ಜಿತ್ ಕೌರ್ ತನ್ನ ಪತಿಯ ಬಿಡುಗಡೆಗಾಗಿ ಪ್ರಯತ್ನ ಮಾಡಿದ್ದರು. ಇಷ್ಟು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಅವರನ್ನು ಬಿಡುಗಡೆ ಮಾಡಲಾದ ಬಳಿಕ ಸೋಮವಾರ ರಾತ್ರಿ ಪಂಚತಾರ ಹೊಟೇಲೊಂದರಲ್ಲಿ ಆರಾಮವಾಗಿ ನಿದ್ದೆಮಾಡುವ ಅವಕಾಶವನ್ನು ಒದಗಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ತಾಯ್ನೆಲ ತಲುಪಿದ 67ರ ಹರೆಯದ ಕಾಶ್ಮೀರ್ ಸಿಂಗ್ ವಾಘಾ ಗಡಿಯಲ್ಲಿ ತನ್ನ ಪತ್ನಿ ಹಾಗೂ ಮೂವರು ಪುತ್ರರನ್ನು ಸೇರಿದ್ದು, ಆನಂದಮಯ, ಭಾವನಾತ್ಮಕ, ಪದಗಳಲ್ಲಿ ವರ್ಣಸಲಾಗದಂತಹ ಸಂತಸವನ್ನು ಅನುಭವಿಸಿದರು. ತನ್ನ ಕುಟುಂಬವನ್ನು ಮರಳಿ ಸೇರಿದ ಸಾರ್ಥಕತೆ ಅವರ ಮುಖದಲ್ಲಿ ತುಂಬಿತುಳುಕುತಿತ್ತು.
|