ಪರೀಕ್ಷೆಯ ಗುಮ್ಮನಿಗೆ ಬೆದರಿದ ವಿದ್ಯಾರ್ಥಿನಿಯೊಬ್ಬಾಕೆ ತನ್ನನ್ನೇ ಗುಂಡಿಟ್ಟು ಸಾಯಿಸಿಕೊಂಡ ದಾರುಣ ಘಟನೆ ಮಂಗಳವಾರ ಮುಂಜಾನೆ ರಾಜಧಾನಿ ನಗರ ದೆಹಲಿಯಲ್ಲಿ ಸಂಭವಿಸಿದೆ.
ತನ್ವಿ ಎಂಬ ಹದಿನಾರರ ಹರೆಯದ ಪ್ಲಸ್ ವನ್ ವಿದ್ಯಾರ್ಥಿನಿ, ವಾಯುವ್ಯ ದೆಹಲಿಯ ಪೀತಂಪುರದ ತನ್ನ ಮನೆಯಲ್ಲಿ ಬಲಹಣೆಗೆ ಗುಂಡಿಟ್ಟುಕೊಂಡಿದ್ದಾಳೆ ಎಂದು ಹಿರಿಯ ಪೊಲೀಸಧಿಕಾರಿ ಹೇಳಿದ್ದಾರೆ.
ಹರ್ಯಾಣದಲ್ಲಿ ಕೃಷಿಕರಾಗಿರುವ ತನ್ನ ತಂದೆಯ ಪರವಾನಿಗೆ ಹೊಂದಿರುವ ರಿವಾಲ್ವರ್ ಬಳಸಿರುವ ಹುಡುಗಿ ಈ ದುಷ್ಕೃತ್ಯ ಎಸಗಿದ್ದಾಳೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇತ್ತೀಚಿನ ದಿನಗಳಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ತನ್ವಿ, ಪರೀಕ್ಷೆಯ ಬಗ್ಗೆ ಚಿಂತಿತಳಾಗಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.
ಪರೀಕ್ಷಾ ಭಯದಿಂದ ನವದೆಹಲಿಯಲ್ಲಿ ಈ ತಿಂಗಳಲ್ಲಿ ಆತ್ಮಹತ್ಯೆ ಎಸಗಿರುವ ಮೂರನೆ ಪ್ರಕರಣ ಇದಾಗಿದೆ. ವೆಂಕಟೇಶ್ವರ ಕಾಲೇಜಿನ ಪ್ರಿಯಾಂಕ ಭಾರದ್ವಾಜ್(19) ಹಾಗೂ ಜ್ಯೋತಿ ಎಂಬಿಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.
|