ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹೆಚ್ಚಿನ ಉಗ್ರರು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಗಡಿಯಾದ್ಯಂತ, ಅದರಲ್ಲೂ ವಿಶೇಷವಾಗಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಪಾಕಿಸ್ತಾನದ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಸರಕಾರ ಲೋಕಸಭೆಯಲ್ಲಿ ಹೇಳಿದೆ.
ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಗೃಹ ಇಲಾಖೆಯ ರಾಜ್ಯ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಲಷ್ಕರೆ-ಇ-ತೋಯ್ಬಾ, ಜೈಶ್-ಇ-ಮೊಹ್ಮದ್, ಹರ್ಕತ್-ಉಲ್-ಜಿಹಾದ್-ಇ-ಇಸ್ಲಾಮಿ, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಅಲ್-ಬದೃ್ ಅಂತಾರಾಷ್ಟ್ರೀಯ ಜಾಲಗಳನ್ನು ಹೊಂದಿರುವ ಉಗ್ರಗಾಮಿ ಸಂಘಟನೆಗಳು ಎಂದು ತಿಳಿಸಿದರು.
ಭದ್ರತಾ ಮತ್ತು ಬೇಹುಗಾರಿಕಾ ಏಜೆನ್ಸಿಗಳು ಇಂತಹ ಸಂಘಟನೆಗಳ ಕಾರ್ಯವನ್ನು ನಿಕಟವಾಗಿ ಗಮನಿಸುತ್ತಿದ್ದು ಮಾಹಿತಿಗಳನ್ನು ರಾಜ್ಯ ಸರಕಾರಗಳೊಂದಿಗೆ ಹಂಚಿಕೊಳ್ಳುತ್ತಿದೆ ಎಂದು ಅವರು ನುಡಿದರು. ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದ್ದು, ರಾಷ್ಟ್ರದೊಳಕ್ಕೆ ಸಂಭಾವ್ಯ ನುಸುಳುವಿಕೆಯನ್ನು ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಲೋಕಸಭೆಯಲ್ಲಿ ತಿಳಿಸಿದರು.
|