ರಾಜ್ಯಾದ್ಯಂತ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗೆ ಹೇರಲಾಗಿದ್ದ ನಿಷೇಧವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಬುಧವಾರ ಹಿಂತೆಗೆದುಕೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಹೇರಲಾದ ನಿಷೇಧವನ್ನು ಹಿಂಪಡೆದ ವಿಚಾರವನ್ನು ರಾಜ್ಯ ವಿಧಾನಸಭಾ ಅದಿವೇಶನದಲ್ಲಿ ಘೋಷಿಸಲಾಯಿತು. ಲಿಂಗ್ಡೋ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ನಿಷೇಧವನ್ನು ಹಿಂತೆಗೆದುಕೊಂಡಿರುವುದಾಗಿ ಮಾಯಾವತಿ ಸದನದಲ್ಲಿ ತಿಳಿಸಿದರು.
ಕಾಲೇಜು ಕ್ಯಾಂಪಸ್ಸುಗಳಲ್ಲಿನ ವಾತಾವರಣವು ಹದಗೆಡುತ್ತಿರುವ, ಮತ್ತು ಇವುಗಳು ಕಾನುನು ಸುವ್ಯವಸ್ಥೆ ಸಮಸ್ಯೆಗಳನ್ನು ತಂದಿಡುತ್ತಿರುವ ಕಾರಣ ಹಾಗೂ ಇವುಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಮಾಯಾವತಿ ಕಾಲೇಜು ಚುನಾವಣೆಗಳಿಗೆ ನಿಷೇಧ ಹೇರಿದ್ದರು.
ಭಾರತವು ಸ್ವಾತಂತ್ರ್ಯಗಳಿಸಿದ ಬಳಿಕ ಕಳೆದ ವರ್ಷ ಹೇರಿದ್ದ ನಿಷೇಧ ನಾಲ್ಕನೆಯದಾಗಿದೆ. 1967, 1972 ಮತ್ತು 2001ರಲ್ಲಿ ಈ ಹಿಂದೆ ನಿಷೇಧ ಹೇರಲಾಗಿತ್ತು. 2003ರಲ್ಲಿ ಮುಲಾಯಂ ಸಿಂಗ್ ಯಾದವ್ ಅಧಿಕಾರಕ್ಕೆ ಬಂದಾಗ ಅವರು ವಿದ್ಯಾರ್ಥಿ ಸಂಘಟನೆಗಳ ಮೇಲೆ ಹೇರಿದ್ದ ಎಲ್ಲ ನಿಷೇಧವನ್ನು ಹಿಂತೆಗೆದಿದ್ದರು.
2003ರಿಂದ 2006ರ ತನಕ ಕ್ಯಾಂಪಸ್ಸುಗಳಲ್ಲಿ ನಡೆದ ವಿವಿಧ ಗಲಭೆಗಳಲ್ಲಿ ಕನಿಷ್ಠ ಪಕ್ಷ 12 ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಚುನಾವಣಾ ಆಯುಕ್ತ ಲಿಂಗ್ಡೋ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿತ್ತು.
ಹೆಚ್ಚಿನ ಸ್ಪರ್ಧಿಗಳು, ಉಚ್ಚಾಟಿತ ಇಲ್ಲವೇ, ಅಮಾನತ್ತುಗೊಂಡ ವಿದ್ಯಾರ್ಥಿಗಳಾಗಿದ್ದ ಕಾರಣ ಕಳೆದ ಶೈಕ್ಷಣಿ ವರ್ಷದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿರಲಿಲ್ಲ.
ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಗಲಭೆ ಎಬ್ಬಿಸಿದ್ದ ಸಮಾಜವಾದಿ ಪಕ್ಷವು ಹಮ್ಮಿಕೊಂಡಿದ್ದ ರಾಲಿಯವೇಳೆ ಗುಂಪು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ ವೇಳೆ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಯನ್ನು ಇಲ್ಲಿ ಸ್ಮರಿಸಬಹುದು.
|