ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರಿಗಳ ಮೇಲೆ ಕೆಂಡ: ಬಾಳ ಠಾಕ್ರೆ ಸರದಿ
ತಮ್ಮ ಮರಾಠಿ ಮಕ್ಕಳ ಓಟ್ ಬ್ಯಾಂಕನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೈಜಾಕ್ ಮಾಡುವುದನ್ನು ತಡೆಯುವ ಯತ್ನವೋ ಎಂಬಂತೆ, ಶಿವಸೇನಾ ವಯೋವೃದ್ಧ ಮುಖಂಡ ಬಾಳ ಠಾಕ್ರೆ ಅವರು ಬಿಹಾರಿಗಳ ವಿರುದ್ಧ ಧ್ವನಿಯೆತ್ತಿದ್ದು, ಬಿಹಾರಿಗಳನ್ನು ದೇಶದ ಎಲ್ಲಾ ಭಾಗಗಳಲ್ಲಿಯೂ 'ಯಾರಿಗೂ ಬೇಡದ ರಾಶಿ' ಎಂದು ಜರೆದಿದ್ದಾರೆ.

ಅವರು ದಕ್ಷಿಣ ಭಾರತದಲ್ಲಿ, ಅಸ್ಸಾಂ ಮತ್ತು ಪಂಜಾಬ್ ಹಾಗೂ ಚಂಡೀಗಢಗಳಲ್ಲಿ ಯಾರಿಗೂ ಬೇಕಾಗಿಲ್ಲ. ಬಿಹಾರಿಗಳು ಹೋಗಿ ನೆಲಸಿದಲ್ಲೆಲ್ಲಾ ಸ್ಥಳೀಯ ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಾ ಬಂದಿದ್ದಾರೆ. ಸಂಸತ್ತಿನಲ್ಲಿ ಮರಾಠಿ-ವಿರೋಧೀ ವಾಗ್ದಾಳಿಯ ಮೂಲಕ ಉ.ಪ್ರ-ಬಿಹಾರಿ ಸಂಸದರು ಮುಂಬಯಿ ಮತ್ತು ಮಹಾರಾಷ್ಟ್ರಕ್ಕೆ ಕೃತಘ್ನತೆ ತೋರಿದ್ದಾರೆ ಎಂದು ಠಾಕ್ರೆ ಅವರು ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಕಿಡಿ ಕಾರಿದ್ದಾರೆ.

ಮುಂಬಯಿ ಜನರು ರಾಷ್ಟ್ರವಿರೋಧಿ ಶಕ್ತಿಗಳನ್ನು ಒಡಲಲ್ಲಿಟ್ಟುಕೊಂಡಿದೆ ಎಂದು ಆರೋಪಿಸುವ ಬಿಹಾರಿ ಮುಖಂಡರು, ಮಹಾರಾಷ್ಟ್ರದಲ್ಲಿರುವ ಉತ್ತರಭಾರತೀಯ-ವಿರೋಧೀ ಬೆಂಕಿಗೆ ತುಪ್ಪ ಎರೆಯುತ್ತಿದ್ದಾರೆ ಮತ್ತು ಈ ರೀತಿ ಮಾಡುವುದರಿಂದ ಅವರ ಬಳಗದವರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಠಾಕ್ರೆ ಅವರು, ಆಕ್ರಮಣ ಕುರಿತು ಪರೋಕ್ಷವಾಗಿ ಎಚ್ಚರಿಸುತ್ತಾ ತಿಳಿಸಿದ್ದಾರೆ.

ಎಂಎನ್ಎಸ್‌ನ ಉತ್ತರಭಾರತೀಯರ ವಿರುದ್ಧದ ಸಮರವು ಮುಂಬಯಿ ಮತ್ತು ಮಹಾರಾಷ್ಟ್ರದ ವಿವಿಧೆಡೆ ಹಿಂಸಾಚಾರ ಸೃಷ್ಟಿಸಿರುವ ಬಗ್ಗೆ ಬಿಹಾರ ಮತ್ತು ಉತ್ತರ ಪ್ರದೇಶ ಸಂಸದರು ಸಂಸತ್ತಿನಲ್ಲಿ ಭಾರೀ ಗದ್ದಲ ಎಬ್ಬಿಸಿದ್ದರು.

ಶಿವಸೇನೆಯಿಂದ ಸಿಡಿದು ತಮ್ಮದೇ ಎಂಎನ್ಎಸ್ ಸ್ಥಾಪಿಸಿದ್ದ ರಾಜ್ ಠಾಕ್ರೆ ಅವರ ಬಂಧನವು ಶಿವಸೇನೆಗೆ ನುಂಗಲಾರದ ತುತ್ತಾಗಿದ್ದು, "ಮರಾಠೀ ಪುತ್ರರ ಒಲವನ್ನು" ಎಂಎನ್ಎಸ್ ತಮ್ಮತ್ತ ಸೆಳೆದುಕೊಳ್ಳುತ್ತದೆ ಎಂಬುದು ಅದರ ಆತಂಕಕ್ಕೆ ಕಾರಣವಾಗಿತ್ತು.

ಪೊಲೀಸರಿಂದ ಪರಿಸ್ಥಿತಿ ಅವಲೋಕನ

ಸೇನಾ ಮುಖ್ಯಸ್ಥ ಬಾಳ ಠಾಕ್ರೆಯವರ ಈ ಹೇಳಿಕೆಗಳು ಮತ್ತಷ್ಟು ಉದ್ವಿಗ್ನತೆ ಕೆರಳಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು ಈ ಕುರಿತು ಕಾನೂನು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೊಲೀಸ್ ಜಂಟಿ ಆಯುಕ್ತ ಕೆ.ಎಲ್.ಪ್ರಸಾದ್, ಪೊಲೀಸರು ಈ ಸಂಪಾದಕೀಯವನ್ನು ವಿವರವಾಗಿ ಪರಿಶೀಲಿಸುತ್ತಿದ್ದು, ಸಂಭವನೀಯ ಕ್ರಮಕ್ಕಾಗಿ ಕಾನೂನು ಸಲಹೆ ಪಡೆಯುವುದಾಗಿ ಹೇಳಿದರು.

ಚುನಾವಣೆಗಳು ಶೀಘ್ರ ನಡೆಯಲಿದೆ. ಹೀಗಾಗಿ ರಾಜಕೀಯ ಮುಖಂಡರು ಜನತೆಯ ಹಾದಿ ತಪ್ಪಿಸಲು ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದವರು ನುಡಿದರು.
ಮತ್ತಷ್ಟು
ಲಕ್ಷಾಂತರ ಭಕ್ತರಿಂದ ಕಾಶಿವಿಶ್ವನಾಥನ ದರ್ಶನ
ರಾಮಸೇತು ವಿಚಾರಣೆ ಎ.15ಕ್ಕೆ
ಕಾಶ್ಮೀರ ಸ್ಫೋಟಕ್ಕೆ ಇಬ್ಬರ ಆಹುತಿ
ರೈತರ ಕಣ್ಣೀರು ಅಳಿಸುವ ತನಕ ನಿಲ್ಲೆವು: ಪ್ರಧಾನಿ
ಉ.ಪ್ರ: ವಿದ್ಯಾರ್ಥಿ ಸಂಘನಿಷೇಧ ಹಿಂತೆಗೆತ
ನಾಗಾಲ್ಯಾಂಡ್: ಮತದಾನ ಆರಂಭ