ರಾಷ್ಟ್ರದಲ್ಲಿರುವ ಅಲ್ಪಸಂಖ್ಯಾತರನ್ನು ಮೂಲಭೂತವಾದಿಗಳಿಂದ ರಕ್ಷಿಸುವ ಅಗತ್ಯವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
"ಅಲ್ಪಸಂಖ್ಯಾತರ ಒಳಿತಿಗಾಗಿ ಮತ್ತು ಅವರಲ್ಲಿನ ತಾರತಮ್ಯ ಹಾಗೂ ಹಿಂದುಳಿದಿರುವಿಕೆಯನ್ನು ತೊಡೆದು ಹಾಕುವ ಖಚಿತತೆಯು ಸರಕಾರದ ನೀತಿಯಾಗಿದೆ" ಎಂದು ಮುಖರ್ಜಿ ನುಡಿದರು.
ಕೆಲವು ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉಗ್ರಗಾಮಿ ಹಾದಿಯನ್ನು ಹಿಡಿದಿರುವುದರ ಅರಿವು ನಮಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಇವರನ್ನು ಒಡೆಯುವ ಮೂಲಭೂತವಾದಿಗಳ ವಿರುದ್ಧ ನಾವು ಇವರನ್ನು ರಕ್ಷಿಸಬೇಕು" ಎಂದು ಅವರು ಜಾಗತಿಕ ಅಲ್ಪಸಂಖ್ಯಾತರ ಸಮಾವೇಶದಲ್ಲಿ ನುಡಿದರು.
ನೀತಿ ಮತ್ತು ರೂಢಿಯಲ್ಲಿಯೂ ಸಮಾನತೆಯ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದರು.
ಸಂವಿಧಾನವು ಎಲ್ಲಾ ಸಮುದಾಯಗಳಿಗೂ ಸಮಾನ ಹಕ್ಕಗಳನ್ನು ನೀಡಿದ್ದರೂ, ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಮತ್ತು ಹಿಂದೂಗಳಿಗಿಂತ ಹೆಚ್ಚಿನ ದರದಲ್ಲಿ ನಿರುದ್ಯೋಗವನ್ನು ಹೊಂದಿದ್ದಾರೆ ಎಂದು ನುಡಿದರು.
ಸಮಾರಂಭದಲ್ಲಿ ಹಾಜರಿದ್ದ ಪ್ರಧಾನಿ ಮನಮೋಹನ್ ಸಿಂಗ್, ಮುಸ್ಲಿಮರಿಗೆ ಉತ್ತಮ ಶಿಕ್ಷಣ ಲಭಿಸುವಂತಾಗಬೇಕು ಎಂದು ಒತ್ತಾಯಿಸಿದರು.
|